ಮಣಿಪಾಲ: ಮಾರ್ಚ್ 8, 9 ಮತ್ತು 10 ರಂದು ‘ದಿ ಕನ್ಸನ್ರ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್’ (ಸಿಡಬ್ಲ್ಯೂಸಿ) ಸಹಯೋಗದಲ್ಲಿ ಮಾಹೆ ಸ್ಕೂಲ್ ಆಫ್ ಕಮ್ಯುನಿಕೇಶನ್ ಸಂಸ್ಥೆಯು ‘ನಮ್ಮ ಅಂಗಡಿ’ ಎಂಬ ಮೂರು ದಿನಗಳ ಮಾರಾಟ ಮೇಳ ಮತ್ತು ವಸ್ತು ಪ್ರದರ್ಶನವನ್ನು ಆಯೋಜಿಸಿದೆ. ‘ಸಿಡಬ್ಲ್ಯೂಸಿ’ ಯೋಜನೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ‘ನಮ್ಮ ಭೂಮಿ’ಸಂಸ್ಥೆಯ ಕಲಾವಿದರು ತಯಾರಿಸಿದ ವಸ್ತುಗಳು ಮೇಳದಲ್ಲಿ ಪ್ರದರ್ಶನಗೊಳ್ಳಲಿವೆ.
ಮಾರ್ಚ್ 8ರ ಬೆಳಗ್ಗೆ 9 ಗಂಟೆಗೆ ಉಡುಪಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಶ್ರೀಮತಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರು ಮಾರಾಟ ಮೇಳ ಮತ್ತು ವಸ್ತು ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ.
‘ನಮ್ಮ ಅಂಗಡಿ’ ಮೇಳದ ಮೂಲಕ ಕುಂದಾಪುರ ಕಲಾವಿದರ ಪ್ರತಿಭೆ ಅನಾವರಣಕ್ಕೆ ವೇದಿಕೆ ಒದಗಿದೆ. ಈ ಮೇಳದಲ್ಲಿ ನೂತನ ಟ್ರೆಂಡ್ಗಳಿಗೆ ಅನುಗುಣವಾಗಿ ವಸ್ತುಗಳನ್ನು ವಿನ್ಯಾಸ ಮಾಡಲಾಗಿದ್ದು, ಕೈಯಿಂದ ತಯಾರಿಸಿದ (ಹ್ಯಾಂಡ್ ಮೇಡ್) ಆಭರಣಗಳು, ಮನೆ ಅಲಂಕಾರಿಕ ವಸ್ತುಗಳು, ಸ್ಥಳೀಯ ಆಹಾರ ಪದಾರ್ಥಗಳನ್ನು ಗ್ರಾಹಕರು ಖರೀದಿಸಬಹುದಾಗಿದೆ. ಈ ಮೇಳದಲ್ಲಿ ದೊರಕುವ ಹಣವನ್ನು ‘ನಮ್ಮ ಭೂಮಿ’ ಸಂಸ್ಥೆಯ ಮಕ್ಕಳ ವಿದ್ಯಾಭ್ಯಾಸಕ್ಕೆ ವಿನಿಯೋಗಿಸಲಾಗುತ್ತದೆ.
‘ಸಿಡಬ್ಲ್ಯೂಸಿ’ ಎಂಬುದು ಲಾಭರಹಿತ ಸಂಸ್ಥೆಯಾಗಿದ್ದು, 1986ರಲ್ಲಿ ಆರಂಭಗೊಂಡಿತು. ಈ ಸಂಸ್ಥೆಯು ಕಾರ್ಮಿಕ ಮತ್ತು ದುರ್ಬಲ ಮಕ್ಕಳು ಏಳಿಗೆಗಾಗಿ ಶ್ರಮಿಸುತ್ತಿದೆ. ‘ನಮ್ಮ ಭೂಮಿ’ ಎಂಬ ಸಮೂದಾಯ ಕ್ಯಾಂಪಸ್ ವಸತಿ ಮೂಲಕ ದುರ್ಬಲ ಮಕ್ಕಳನ್ನು ಸಭಲರನ್ನಾಗಿಸಲು ‘ಸಿಡಬ್ಲ್ಯೂಸಿ’ ಮುಂದಾಗಿದೆ.