ಉಡುಪಿ: ಉಡುಪಿ ಜಿಲ್ಲೆಯ ಒಟ್ಟು 51 ಪರೀಕ್ಷಾ ಕೇಂದ್ರಗಳಲ್ಲಿ ಮಾರ್ಚ್ 21 ರಿಂದ ಏಪ್ರಿಲ್ 4 ರ ವರೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯು ನಡೆಯಲಿದ್ದು, ಪರೀಕ್ಷೆಯು ಸುಸೂತ್ರವಾಗಿ ಮತ್ತು ದೋಷ ರಹಿತವಾಗಿ ನಡೆಸಲು ಮತ್ತು ನಡೆಯಬಹುದಾದ ಎಲ್ಲಾ ರೀತಿಯ ಅವ್ಯವಹಾರಗಳನ್ನು ತಡೆಗಟ್ಟಲು ಮತ್ತು ಕಿಡಿಗೇಡಿಗಳು ಪರೀಕ್ಷಾ ಕೇಂದ್ರದ ಪರಿಸರವನ್ನು ಕಲುಷಿತಗೊಳಿಸದಂತೆ ನಿಗಧಿಪಡಿಸಿದ ಎಲ್ಲಾ ಪರೀಕ್ಷಾ ಕೇಂದ್ರಗಳ ಸುತ್ತಲೂ ಪರೀಕ್ಷೆಗಳು ನಡೆಯುವ ದಿನಗಳಂದು ಬೆಳಗ್ಗೆ 8 ರಿಂದ ರಾತ್ರಿ 6 ರ ವರೆಗೆ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಲೂ ಹಾಗೂ ಸುತ್ತಲೂ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ, 144 (1) ರಂತೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಆದೇಶ ಹೊರಡಿಸಿರುತ್ತಾರೆ.
ಈ ಆದೇಶದಂತೆ ಪರೀಕ್ಷಾ ಕೇಂದ್ರಗಳ ಸುತ್ತ ಜೆರಾಕ್ಸ್ ಅಂಗಡಿಗಳನ್ನು ಮುಚ್ಚುವುದು, ಯಾವುದೇ ಸಾರ್ವಜನಿಕರು 5 ಜನ ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ನಿಷೇಧಿತ ಪ್ರದೇಶವೆಂದು ಜಾರಿಗೊಳಿಸಿದ ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ ಗುಂಪು ಸೇರುವುದು ಅಥವಾ ತಿರುಗುವುದು, ಅನುಮಾನಾಸ್ಪದ ವ್ಯಕ್ತಿಗಳು ಪರೀಕ್ಷಾ ಕೇಂದ್ರವನ್ನು ಪ್ರವೇಶಿಸುವುದು, ಪರೀಕ್ಷಾ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಹೊರಗಿನ ವ್ಯಕ್ತಿಗಳು ಯಾವುದೇ ರೀತಿಯ ಬೆದರಿಕೆ ಒಡ್ಡುವುದನ್ನು, ನಿಷೇಧಿತ ಪರೀಕ್ಷಾ ಕೇಂದ್ರಗಳ ಸುತ್ತ ಮೊಬೈಲ್ ಬಳಕೆಯನ್ನು, ಪರೀಕ್ಷಾ ಗೌಪ್ಯ ಸಾಮಾಗ್ರಿಗಳನ್ನು ಯಾವುದೇ ಕಾರಣಕ್ಕೂ ಪರೀಕ್ಷಾ ಕೇಂದ್ರದಿಂದ ಹೊರಗಡೆ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದ್ದು, ಈ ನಿಷೇಧಾಜ್ಞೆ ಆದೇಶವು ಸರಕಾರದಿಂದ ಅಥವಾ ಸರಕಾರದ ಆದೇಶದಂತೆ ನಡೆಸಲ್ಪಡುವ ಯಾವುದೇ ಕಾರ್ಯಕ್ರಮ, ಸಭೆ, ಸಮಾರಂಭಗಳಿಗೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.