ಉಡುಪಿ: ಕಾರ್ಮಿಕ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆಯಡಿ ಅಸಂಘಟಿತ ಕಾರ್ಮಿಕರನ್ನು ನೋಂದಾಯಿಸುವ ಸಲುವಾಗಿ ಮಾರ್ಚ್ 7 ರಿಂದ 13 ರ ವರೆಗೆ ಪಿಂಚಣಿ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ನೋಂದಣಿ ಶಿಬಿರ ಆಯೋಜಿಸಲಾಗಿರುತ್ತದೆ.
ಮಾ.7 ರಂದು ಬೆಳಗ್ಗೆ 11 ಗಂಟೆಗೆ ನಗರದ ಒಳಕಾಡು ವ್ಯವಹಾರ ಕಾಂಪ್ಲೆಕ್ಸ್ ಬೀಡಿನಗುಡ್ಡೆ ಇಲ್ಲಿ ಪಿಂಚಣಿ ಸಪ್ತಾಹದ ಉದ್ಘಾಟನಾ ಕಾರ್ಯಕ್ರಮ ಹಾಗೂ ನೋಂದಣಿ ಶಿಬಿರ ನಡೆಯಲಿದೆ.
ಮಾ.8 ರಂದು ಬೆಳಗ್ಗೆ 8 ಗಂಟೆಗೆ ನಗರದ ಕೆ.ಎಸ್.ಆರ್.ಟಿ.ಸಿ ನರ್ಮ್ ಬಸ್ ಸ್ಟ್ಯಾಂಡ್ ಬಳಿ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆಯ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಬೀದಿ ನಾಟಕ ಪ್ರದರ್ಶನ ಹಾಗೂ 10 ಗಂಟೆಯಿಂದ ನಗರದ ಅಂಬಲಪಾಡಿಯ ಉಡುಪಿ ಜಿಲ್ಲಾ ಸವಿತಾ ಸಮಾಜ ಸಮುದಾಯ ಭವನದಲ್ಲಿ ಕ್ಷೌರಿಕ ವೃತ್ತಿದಾರರಿಗೆ ನೋಂದಣಿ ಶಿಬಿರ, ಮಾ.9 ರಂದು ಬೆಳಗ್ಗೆ 10 ರಿಂದ ಉದ್ಯಾವರದ ಗುಡ್ಡೆಯಂಗಡಿ ವಿಜಯ ಕಾಂಪ್ಲೆಕ್ಸ್ನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಗ್ಯಾರೇಜ್ ಮಾಲೀಕರ ಸಂಘ, ಉಡುಪಿ ವಲಯ ಇಲ್ಲಿ ಮೆಕ್ಯಾನಿಕ್ ವೃತ್ತಿದಾರರಿಗೆ ನೋಂದಣಿ ಶಿಬಿರ, ಮಾ.10 ರಂದು ಬೆಳಗ್ಗೆ 11 ರಿಂದ ಉಡುಪಿ ಜಿಲ್ಲಾ ಬೇಕರಿ ಹಾಗೂ ಖಾದ್ಯ ತಿನಿಸುಗಳ ತಯಾರಕರು ಮತ್ತು ಮಾರಾಟಗಾರರ ಸಂಘ, ಉಡುಪಿ, ಬ್ರಹ್ಮಾವರ / ಕುಂದಾಪುರ ಇಲ್ಲಿ ಬೇಕರಿ ಹಾಗೂ ಖಾದ್ಯ ತಿನಿಸುಗಳ ತಯಾರಕರು ಹಾಗೂ ಮಾರಾಟಗಾರರ ಕಾರ್ಮಿಕರಿಗೆ, ಮಾ.11 ರಂದು ಬೆಳಗ್ಗೆ 11 ರಿಂದ ಕಾರ್ಕಳ ತಾಲೂಕು ಕಚೇರಿ ಆವರಣದ ಕಾರ್ಕಳ ವೃತ್ತ ಕಾರ್ಮಿಕ ನಿರೀಕ್ಷಕರ ಕಚೇರಿಯಲ್ಲಿ ಹಾಗೂ ಮಾ.12 ರಂದು ಬೆಳಗ್ಗೆ 11 ರಿಂದ ಕುಂದಾಪುರ ವೃತ್ತ ಕಾರ್ಮಿಕ ನಿರೀಕ್ಷಕರ ಕಚೇರಿಯಲ್ಲಿ ಅಸಂಘಟಿತ ಕಾರ್ಮಿಕರಿಗೆ, ಮಾ.13 ರಂದು ಬೆಳಗ್ಗೆ 11 ರಿಂದ ನಗರದ ಕುಂಜಿಬೆಟ್ಟು ಗಾಯತ್ರಿ ಕಲ್ಯಾಣ ಮಂಟಪದ ಬಳಿ ಇರುವ ಉಡುಪಿ ಜಿಲ್ಲಾ ವಿಶ್ವಕರ್ಮ ಕಾರ್ಪೆಂರ್ಸ್ ಯೂನಿಯನ್ ಕಚೇರಿಯಲ್ಲಿ ಕಾರ್ಪೆಂಟರ್ ವೃತ್ತಿದಾರರಿಗೆ ನೋಂದಣಿ ಶಿಬಿರ ನಡೆಯಲಿದ್ದು, ಮ.2 ಗಂಟೆಗೆ ಹೆಬ್ರಿಯ ಗ್ರಾಮ ವಿಕಾಸ ಸಮಿತಿ ಹಾಗೂ ಶ್ರೀ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ ಇಲ್ಲಿ ಪಿಂಚಣಿ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾದ ನೋಂದಣಿ ಶಿಬಿರದ ಸಮಾರೋಪ ಸಮಾರಂಭ ನಡೆಯಲಿದೆ.
ಈ ಯೋಜನೆಯಡಿ 18-40 ವರ್ಷದೊಳಗಿನ, ಮಾಸಿಕ 15,000 ರೂ. ಗಿಂತ ಕಡಿಮೆ ಆದಾಯ ಹೊಂದಿರುವ, ಆದಾಯ ತೆರಿಗೆ ಪಾವತಿಸದ, ಇ.ಎಸ್.ಐ, ಇ.ಪಿ.ಎಫ್, ಎನ್.ಪಿ.ಎಸ್ ಯೋಜನೆಯ ಫಲಾನುಭವಿಗಳಲ್ಲದ ಅಸಂಘಟಿತ ಕಾರ್ಮಿಕರು, ಆರಂಭಿಕ ವಂತಿಕೆ ಮೊತ್ತ, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಪುಸ್ತಕ, ನಾಮನಿರ್ದೇಶಿತರ ವಿವರ ಹಾಗೂ ಮೊಬೈಲ್ ಸಂಖ್ಯೆಯೊಂದಿಗೆ ನೋಂದಣಿ ಶಿಬಿರದಲ್ಲಿ ಭಾಗವಹಿಸಿ, ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.