ಕಾರ್ಕಳ: ಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ವಿಸ್ತರಣಾ ನವೀಕರಣ ಕಟ್ಟಡ ಸಮೃದ್ಧಿ ಸಹಕಾರಿ ಸೌಧ ಮಾ.11ರಂದು ಉದ್ಘಾಟನೆಗೊಳ್ಳಲಿದೆ. ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ನಾನಾಪಾಟೇಕರ್ ಸಭಾಭವನದಲ್ಲಿ ಅಂದು ಬೆಳಿಗ್ಗೆ 10. 30 ಗಂಟೆಗೆ ಉದ್ಘಾಟನಾ ಸಮಾರಂಭ ಜರುಗಲಿದೆ. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಸಚಿವ ವಿ. ಸುನೀಲ್ ಕುಮಾರ್ ಸಮೃದ್ಧಿ ಸಹಕಾರಿ ಸೌಧ ಉದ್ಘಾಟಿಸಲಿರುವರು. ಹವಾನಿಯಂತ್ರಿತ ಬ್ಯಾಂಕಿಂಗ್ ಕಚೇರಿಯನ್ನು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಲಿದ್ದು, ಗೃಹಬಳಕೆ ವಿಭಾಗವನ್ನು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ನವೋದಯ ಸಹಕಾರಿ ಭವನವನ್ನು ಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ. ವಾದಿರಾಜ ಶೆಟ್ಟಿ, ಭದ್ರತಾ ಕೊಠಡಿಯನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ನಿರ್ದೇಶಕ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು, ರಸಗೊಬ್ಬರ ವಿಭಾಗವನ್ನು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಪಡಿತರ ವಿಭಾಗವನ್ನು ದ.ಕ. ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಸುಚರೀತ ಶೆಟ್ಟಿ ಹಾಗೂ ಆಡಳಿತ ಕಚೇರಿಯನ್ನು ಮುಂಡ್ಕೂರು ದೊಡ್ಡಮನೆ ಫ್ಯಾಮಿಲಿ ಟ್ರಸ್ಟ್ ಅಧ್ಯಕ್ಷ ಎನ್. ಎಸ್. ಶೆಟ್ಟಿ ಉದ್ಘಾಟಿಸಲಿದ್ದಾರೆ.
ಆಶೀರ್ವಚನ
ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ರಾಮದಾಸ ಆಚಾರ್ಯ ಆಶೀರ್ವಚನ ನೀಡಲಿರುವರು. ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಾಜಿ ಅಧ್ಯಕ್ಷ ಜಗದೀಶ್ಚಂದ್ರ ಹೆಗ್ಡೆ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರವೀಂದ್ರ ಎಚ್. ಶೆಟ್ಟಿ, ಮುಂಡ್ಕೂರು ಚರ್ಚ್ ಧರ್ಮಗುರು ರೋನಾಲ್ಡ್ ಮಿರಾಂದ, ಆರ್‌ಜೆಎಂ ಖತೀಬರು ಹಾರಿಸ್ ಮದನಿ ಉಪಸ್ಥಿತರಿರುವರು. ಸಹಕಾರ ಸಂಘಗಳ ಉಪನಿಬಂಧಕ ಲಕ್ಷ್ಮೀ ನಾರಾಯಣ ಜಿ. ಎನ್., ಮುಂಡ್ಕೂರು ಗ್ರಾ. ಪಂ. ಅಧ್ಯಕ್ಷೆ ಸುಶೀಲ ಬಾಬು, ಉಪಾಧ್ಯಕ್ಷ ಭಾಸ್ಕರ್ ಎಂ. ಶೆಟ್ಟಿ, ಇನ್ನಾ ಗ್ರಾ. ಪಂ. ಅಧ್ಯಕ್ಷ ಕುಶ ಆರ್.ಮೂಲ್ಯ, ವಿಠೋಭ ದೇವಸ್ಥಾನದ ಮೊಕ್ತೇಸರ ವೆಂಕಟೇಶ್ ಕಾಮತ್, ಜಾರಿಗೆಕಟ್ಟೆ ಶ್ರೀ ಕೊರಗಜ್ಜ ಕ್ಷೇತ್ರದ ಧರ್ಮದರ್ಶಿ ದಿವಾಕರ ಪೂಜಾರಿ, ಕಜೆ ಮಾರಿಗುಡಿ ದೇವಸ್ಥಾನದ ಗೌರವಾಧ್ಯಕ್ಷ ಎಂ. ಜಿ. ಕರ್ಕೇರಾ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ವಿನಯ್ ಕುಮಾರ್ ಶೆಟ್ಟಿ ಹಾಗೂ ಪ್ರಗತಿಪರ ಕೃಷಿಕ ಸುಭೋದ ಶೆಟ್ಟಿ ಭಾಗವಹಿಸಲಿದ್ದಾರೆ ಎಂದು ಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ. ವಾದಿರಾಜ ಶೆಟ್ಟಿ, ಉಪಾಧ್ಯಕ್ಷ ಸಿಲ್ವೆಸ್ಟರ್ ಡಿಮೆಲ್ಲೊ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರುಣ್ ಕುಮಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಶತಮಾನ ಕಂಡ ಸಹಕಾರಿ ಸಂಘ
ಶತಮಾನದ ಹಿಂದೆ ದೊಡ್ಡಮನೆ ವೆಂಕಣ್ಣ ಶೆಟ್ಟಿ ಅವರಿಂದ ಸ್ಥಾಪಿಸಲ್ಪಟ್ಟ ಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘವು ಪ್ರಸ್ತುತ 3291 ಸದಸ್ಯರನ್ನು ಹೊಂದಿದೆ. ಮುಂಡ್ಕೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಸೊಸೈಟಿಯು ಇನ್ನಾ, ಸಚ್ಚರಿಪೇಟೆಯಲ್ಲಿ ಶಾಖೆಗಳನ್ನು ತೆರೆದಿದೆ. 2002ರಿಂದ ಸಚ್ಚರಿಪೇಟೆಯಲ್ಲಿ, 2004ರಿಂದ ಇನ್ನಾದಲ್ಲಿ ಸೊಸೈಟಿಯು ಸ್ವಂತ ಕಟ್ಟಡದಲ್ಲೇ ಕಾರ್ಯಾಚರಿಸುತ್ತಿದೆ. ಸಂಘವು ಸತತ 7 ಬಾರಿ ಡಿಸಿಸಿ ಬ್ಯಾಂಕ್ ಕೊಡಮಾಡುವ ವಿಶೇಷ ಪ್ರೋತ್ಸಾಹ ಬಹುಮಾನಕ್ಕೆ ಪಾತ್ರವಾಗಿದೆ. ಸಂಘದಲ್ಲಿ ಶಾಂಭವೀ ನಗದು ಪತ್ರ, ಸಂಚಯ ಠೇವಣಾತಿ ಖಾತೆ, ನಿರಖು ಠೇವಣಾತಿ, ಪಿಗ್ಮಿ ಠೇವಣಿ ಉಳಿತಾಯ ಯೋಜನೆಗಳು ಲಭ್ಯವಿದ್ದು, ಕೃಷಿಕರಿಗೆ ರಸಗೊಬ್ಬರ, ಕೃಷಿ ಉಪಕರಣ, ಗೃಹೋಪಯೋಗಿ ವಸ್ತುಗಳು, ಪಡಿತರ ಸಾಮಗ್ರಿಗಳು ದೊರೆಯುತ್ತಿದೆ.
ಎಂ. ವಾದಿರಾಜ್ ಶೆಟ್ಟಿ
ಸಹಕಾರಿ ಧುರೀಣ, ಪ್ರಗತಿಪರ ಕೃಷಿಕ, ಉದ್ಯಮಿ ಎಂ. ವಾದಿರಾಜ್ ಶೆಟ್ಟಿ ಅವರು 1994ರಿಂದ ನಿರಂತರವಾಗಿ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ 20 ವರ್ಷಗಳಿಂದ ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ, 15 ವರ್ಷಗಳಿಂದ ಕಾರ್ಕಳ ಕೃಷಿ ಉತ್ಪನ್ನ ಮಾರುಕಟ್ಟೆ ಸಂಘದ ಅಧ್ಯಕ್ಷರಾಗಿ, ನವೋದಯದ ಟ್ರಸ್ಟಿಯಾಗಿ ಸೇವೆ ಸಲ್ಲಿಸುತ್ತಿರುವ ವಾದಿರಾಜ್ ಶೆಟ್ಟಿ, ಉಪಾಧ್ಯಕ್ಷರಾಗಿ ಸಿಲ್ವೆಸ್ಟರ್ ಡಿಮೆಲ್ಲೊ, ನಿರ್ದೇಶಕರಾದ ಪ್ರವೀಣ್ ಶೆಟ್ಟಿ ಇನ್ನಾ, ಮಹಾಬಲ ಪೂಜಾರಿ, ಅಮರನಾಥ ಶೆಟ್ಟಿ ಇನ್ನಾ, ಉಮೇಶ್ ಶೆಟ್ಟಿ, ಪುರುಷೋತ್ತಮ ಪೂಜಾರಿ, ಅಶೋಕ್ ಶೆಟ್ಟಿ ಖಂಡಿಗ, ಸಂಜೀವ, ಅನಸೂಯ ಸುಧಾಕರ ಶೆಟ್ಟಿ, ಲತಾ ಭಟ್ ಪೊಸ್ರಾಲು, ಕು. ಲೀಲಾ, ಜಯಂತ್ ಕುಮಾರ್ (ಆರ್ಥಿಕ ಪ್ರತಿನಿಧಿ) ಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ.