ಚಿಕ್ಕೋಡಿ : ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಸುರಿದ ಧಾರಾಕಾರ ಮಳೆಗೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಹಲವು ಕೆಳ ಹಂತದ ಸೇತುವೆಗಳು ಜಲಾವೃತವಾಗಿವೆ. ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್ನಿಂದ ಕೃಷ್ಣಾನದಿಗೆ 49,500 ಕ್ಯೂಸೆಕ್ ನೀರು ಹರಿದು ಬರುತ್ತಿರುವ ಹಿನ್ನೆಲೆ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿ, ಮೈದುಂಬಿ ಹರಿಯುತ್ತಿದೆ.ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ಮಳೆಯ ಅಬ್ಬರ ಹೆಚ್ಚಳವಾಗಿದೆ. ವಿನಯಕುಮಾರ ರಜಪೂತ ಎಂಬುವವರಿಗೆ ಸೇರಿದ ಕಾರಿನ ಮೇಲೆ ಮರವೊಂದು ಬಿದ್ದಿದೆ. ಅದೃಷ್ಟವಶಾತ್ ಸಾವಿನ ದವಡೆಯಿಂದ ಅವರು ಪಾರಾಗಿದ್ದಾರೆ.
ಜಿಲ್ಲೆಯಾದ್ಯಂತ ಈಗಾಗಲೇ 83 ಸೇತುವೆಗಳ ಮೇಲೆ ಜಿಲ್ಲಾ ಪೊಲೀಸರು ನಿಗಾ ವಹಿಸಲಾಗಿದೆ ಎಂದು ಬೆಳಗಾವಿ ಎಸ್ಪಿ ಡಾ. ಸಂಜೀವ ಪಾಟೀಲ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಹುಕ್ಕೇರಿ ತಾಲೂಕಿನಲ್ಲಿ ಮಳೆ ಅಬ್ಬರ ಹೆಚ್ಚಾಗಿದ್ದು, ಹುಕ್ಕೇರಿ ಪಟ್ಟಣದಲ್ಲಿ ನಿಲ್ಲಿಸಿದ ಕಾರ್ವೊಂದರ ಮೇಲೆ ಮರವೊಂದು ಬಿದ್ದಿರುವ ಘಟನೆ ಸಂಭವಿಸಿದೆ. ವಿನಯಕುಮಾರ ರಜಪೂತ ಎಂಬುವರಿಗೆ ಸೇರಿದ್ದ ಕಾರು ಇದಾಗಿದೆ. ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂಬುದು ತಿಳಿದುಬಂದಿದೆ.
ಮತ್ತೊಂದು ಕಡೆ ವೇದಗಂಗಾ ನದಿಯಲ್ಲಿ ಒಳಹರಿವು ನೀರಿನ ಮಟ್ಟ ಹೆಚ್ಚಳವಾದ ಪರಿಣಾಮವಾಗಿ ನಿಪ್ಪಾಣಿ ತಾಲೂಕಿನ ಜತ್ರಾಟ- ಭೀವಶಿ ಸೇತುವೆ ಮುಳುಗಡೆಯಾಗಿದೆ. ಮುಂಜಾಗ್ರತಾ ಕ್ರಮವಾಗಿ ನಿಪ್ಪಾಣಿ ಪೊಲೀಸರು ರಸ್ತೆಗೆ ಬ್ಯಾರಿಕೇಡ್ ಅಳವಡಿಸಿ ಸಂಚಾರವನ್ನು ಬಂದ್ ಮಾಡಿದ್ದಾರೆ. ಇನ್ನೊಂದೆಡೆ ಕಾಗವಾಡ ಮಾರ್ಗವಾಗಿ ರಾಜಾಪುರದಿಂದ ಮಂಗಾವತಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಿಂದ ರಸ್ತೆ ಜಲಾವೃತವಾಗಿದೆ. ಆ ಮಾರ್ಗವನ್ನು ಪೊಲೀಸರು ಬಂದ್ ಮಾಡಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲೂ ಮಳೆ ಅಬ್ಬರ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ನಿನ್ನೆ ರಾತ್ರಿಯಿಂದ ನಿರಂತರವಾಗಿ ಬಿರುಸಿನ ಮಳೆ ಸುರಿಯುತ್ತಿದೆ. ಪರಿಣಾಮ ಮನೆಗಳಿಗೆ ಮಳೆಯ ನೀರು ನುಗ್ಗುತ್ತಿದೆ. ಮುನ್ನೆಚ್ವರಿಕೆ ಕ್ರಮವಾಗಿ ಜಿಲ್ಲೆಯ ಮೂರು ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಬಿರುಸಿನ ಮಳೆಯಿಂದಾಗಿ ನಗರದಲ್ಲಿ ರಸ್ತೆ, ತಗ್ಗು ಪ್ರದೇಶದಲ್ಲಿ ನೀರು ನಿಂತಿದೆ. ಜೆ ಆರ್ ನಗರ, ಉದಯ ನಗರ, ಕೈಲಾಸ ನಗರ ಸೇರಿದಂತೆ ಹಲವೆಡೆ ಮನೆಗಳಿಗೆ ಮಳೆ ನೀರು ನುಗ್ಗಿರುವುದರಿಂದ ಜನ ಕಂಗಾಲಾಗಿದ್ದಾರೆ. ಲಾಲಗೇರಿ ಕ್ರಾಸ್, ಕೆಬಿಎನ್ ಆಸ್ಪತ್ರೆ ಮುಂಭಾಗದ ರಸ್ತೆಗಳು ಜಲಾವೃತಗೊಂಡಿವೆ. ಹಳೆ ಜೇವರ್ಗಿ ರಸ್ತೆಯ ಹಾಗೂ ಪಿಡಿಎ ಕಾಲೇಜು ಬಳಿಯ ರೈಲ್ವೆ ಅಂಡರ್ಪಾಸ್ಗಳಲ್ಲಿ ಮಳೆ ನೀರು ನಿಂತು ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ಮಳೆ ಬೀಳುತ್ತಿರುವುದರಿಂದ ಜನ ಮನೆಯಿಂದ ಹೊರಬರಲು ಹಿಂದೇಟು ಹಾಕ್ತಿದ್ದು, ವಾಹನ ಸಂಚಾರ ಇಳಿಕೆಯಾಗಿ ರಸ್ತೆಗಳು ಖಾಲಿ ಖಾಲಿಯಾಗಿವೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ, ಸೇಡಂ, ಹಾಗೂ ಚಿಂಚೋಳಿ ತಾಲೂಕಿನ ಶಾಲಾ ಕಾಲೇಜುಗಳಿಗೆ ತಾಲೂಕು ಆಡಳಿತದಿಂದ ರಜೆ ಘೋಷಿಸಲಾಗಿದೆ. ಜಿಲ್ಲೆಯ ಇತರೆ ತಾಲೂಕುಗಳಲ್ಲಿಯೂ ಮಳೆಯ ಪ್ರಮಾಣವನ್ನು ನೋಡಿಕೊಂಡು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲು ತಾಲೂಕು ಆಡಳಿತಕ್ಕೆ ಕಲಬುರಗಿ ಜಿಲ್ಲಾಧಿಕಾರಿ ಬಿ. ಪೌಜಿಯಾ ತರನ್ನುಮ್ ಅವರು ಸೂಚನೆ ನೀಡಿದ್ದಾರೆ. ಮೂರು ತಾಲೂಕುಗಳಲ್ಲಿ ಆಯಾ ತಹಶೀಲ್ದಾರರು, ಬಿಇಓ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಸೇರಿಕೊಂಡು ಬಿರುಸಿನ ಮಳೆಯಾಗುವ ಸಾಧ್ಯತೆ ಇರುವ ಕಾರಣ ಒಂದು ದಿನ ಎಲ್ಲಾ ಶಾಲಾ ಕಾಲೇಜಿಗೆ ರಜೆ ಘೋಷಣೆ ಮಾಡಿ ಆದೇಶಿಸಿದ್ದಾರೆ.