ಮೂಡಬಿದ್ರೆ: ಕೆಲಸಕ್ಕೆಂದು ಮುಂಬೈಗೆ ಹೋಗಿದ್ದ ಮಗ 36 ವರ್ಷಗಳ ಬಳಿಕ ತಾಯಿಯ ಮಡಿಲು ಸೇರಿದ್ದಾರೆ. ಮಗ ಮರಳಿ ಮನೆಗೆ ಬಂದೇ ಬರುತ್ತಾನೆ ಎಂದು ಕೆಲವು ಸಮಯದ ಹಿಂದೆ ಮಂತ್ರದೇತೆ ನೀಡಿದ್ದ ಅಭಯ ನಿಜವಾಗಿದ್ದು ಕುಟುಂಬದವರು ಸಂತಸಗೊಂಡಿದ್ದಾರೆ. ಹೌದು ಇಂತಹ ಘಟನೆಗೆ ಸಾಕ್ಷಿಯಾದದ್ದು ಮೂಡುಬಿದಿರೆ ತಾಲೂಕಿನ ಇರುವೈಲು ಗ್ರಾಮ.
ಈ ಗ್ರಾಮದ ಚಂದ್ರಶೇಖರ್ ಎನ್ನುವ ವ್ಯಕ್ತಿ ಕಳೆದ 36 ವರ್ಷಗಳ ಹಿಂದೆ ಕೆಲಸಕ್ಕೆಂದು ಮುಂಬೈಗೆ ಹೋಗಿದ್ದರು. ಹೀಗೆ ಹೋದವರು ಸುಮಾರು 7 ತಿಂಗಳು ಮಾತ್ರ ಮನೆಯವರಿಗೆ ಪತ್ರದ ಮೂಲಕ ಸಂಪರ್ಕದಲ್ಲಿದ್ದರು ಆದರೆ ಆ ಬಳಿಕ ಕುಟುಂಬದ ಕೈಗೆ ಸಿಗದೇ ದೂರಾಗಿದ್ದರು. ಇದರಿಂದ ತಾಯಿ ತೀರಾ ನೊಂದಿದ್ದರು. ಮನೆಯವರು ಮಗ ಮರಳಿ ಬರುವಂತೆ ನೂರಾರು ಹರಕೆ ಸಲ್ಲಿಸಿದ್ದರು. ಆದರೆ ಅವ್ಯಾವುದೂ ಸಹಾಯಕ್ಕೆ ಬರದೇ ಹೋಯಿತು. ಕೊನೆಗೆ ಮಂತ್ರದೇವತೆ ಮಗ ಬದುಕಿದ್ದಾನೆ ಮುಂದಿನ ದೈವ ದರ್ಶನದ ವೇಳೆಗೆ ಅವನಿಂದಲೇ ಸೇವೆ ನಡೆಯುತ್ತದೆ ಎಂದು ಅಭಯ ನೀಡಿದ ಪರಿಣಾಮ ಮನೆಯವರು ಧೈರ್ಯದಿಂದಿದ್ದರು. ಹೀಗೇ ಕೆಲವು ಸಮಯದಲ್ಲಿ ಮುಂಬೈಯಲ್ಲಿ ನೆಲೆಸಿದ್ದ ಊರಿನ ವ್ಯಕ್ತಿಯೊಬ್ಬರಿಂದ ಕೊನೆಗೊಂದು ದಿನ ಚಂದ್ರಶೇಖರ್ ಸುಳಿವು ಸಿಕ್ಕಿಯೇ ಬಿಟ್ಟಿತು. ಕೊನೆಗೆ ಮುಂಬೈಯಲ್ಲಿ ನೆಲೆಸಿರುವ ದೂರದ ಸಂಬಂಧಿಕರೋರ್ವರ ಸಂಪರ್ಕ ಸಾಧಿಸಿ ಅವರಿಂದ ಚಂದ್ರಶೇಖರ್ ಅವರನ್ನು ನೋಡಿಕೊಂಡಿದ್ದ ಮರಾಠಿ ಕುಟುಂಬವೊಂದರ ಮೊಬೈಲ್ ಸಂಖ್ಯೆ ಸಿಕ್ಕಿದ್ದರಿಂದ ಸಂಪರ್ಕ ಸಾಧ್ಯವಾಗಿದೆ.

ಕೊನೆಗೂ ಮೇ.29ರಂದು ನಡೆದ ದೈವ ದರ್ಶನದ ಮೂರು ದಿನಗಳ ಮೊದಲು ಚಂದ್ರಶೇಖರ್ ಮನೆ ಸೇರಿದ್ದಾರೆ. ಚಂದ್ರಶೇಖರ್ ಮುಂಬೈಯಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆಂದು ಹೇಳಲಾಗಿದೆ. ಕೆಲವು ವರ್ಷಗಳ ಕಾಲ ಕುಟುಂಬಸ್ಥರನ್ನೇ ಮರೆತುಬಿಡುವಂತಹ ಮಾನಸಿಕ ಸಮಸ್ಯೆ ಅನುಭವಿಸಿದ್ದರು. ಕೊನೆಗೆ 25 ವರ್ಷಗಳ ಹಿಂದೆ ಬಾಲು ಕಾಂಬ್ಳೆ ಎನ್ನುವ ಮರಾಠಿ ಕುಟುಂಬವೊಂದು ಅವರಿಗೆ ಆಶ್ರಯ ನೀಡಿ ಚಂದ್ರಶೇಖರ್ ಅವರಿಗೆ ಸೂಕ್ತ ಚಿಕಿತ್ಸೆ ನೀಡಿದೆ. ಕೊಂಚಮಟ್ಟಿಗೆ ಚೇತರಿಸಿಕೊಂಡು ಅದೇ ಕುಟುಂಬದ ಹೊಟೇಲ್ ನಲ್ಲಿ ಉದ್ಯೋಗವನ್ನೂ ಅವರು ಶುರುಮಾಡಿದರು. ಮಗ ಮನೆಗೆ ಬಂದದ್ದು ಮಂತ್ರದೇವತೆಯ ನುಡಿಯಿಂದ ಸಾಧ್ಯವಾಯ್ತು ಎಂದು ಕುಟುಂದವರು ಸಂತಸ ವ್ಯಕ್ತಪಡಿಸಿದ್ದಾರೆ. ಚಂದ್ರಶೇಖರ್ ಅವರು ದೈವ ದರ್ಶನ ಮುಗಿಸಿ ಮರಳಿ ಮುಂಬೈ ಸೇರಿದ್ದು ತಮಗೆ ಆಸರೆ ಕೊಟ್ಟರನ್ನು ಎಂದಿಗೂ ಮರೆಯುವುದಿಲ್ಲ ಹಾಗೆ ಆಗಾಗ ದೈವದ ಕೆಲಸಕ್ಕೆ ಊರಿಗೆ ಬಂದೇ ಬರುತ್ತೇನೆ ಎಂದು ತಾಯಿಗೆ ಚಂದ್ರಶೇಖರ್ ವಾಗ್ದಾನ ಮಾಡಿದ್ದಾರೆ.












