udupixpress
Home Trending ಡಿಜಿಟಲ್ ಆರ್ಟ್ ಈ ಯುವಕನ ಹಾರ್ಟ್: ಶೃಂಗೇರಿ ಹುಡುಗ ಮನೋಜ್ ಶರ್ಮರ ಕಲಾಕೃತಿಗಳಿಗೆ ಯೂತ್ ಫುಲ್...

ಡಿಜಿಟಲ್ ಆರ್ಟ್ ಈ ಯುವಕನ ಹಾರ್ಟ್: ಶೃಂಗೇರಿ ಹುಡುಗ ಮನೋಜ್ ಶರ್ಮರ ಕಲಾಕೃತಿಗಳಿಗೆ ಯೂತ್ ಫುಲ್ ಫಿದಾ !

ಇದು”ಬಣ್ಣದ ಕನಸುಗಾರರು” ಸರಣಿಯ ಮೂರನೆಯ ಕಂತು. ಈ ಸರಣಿಯಲ್ಲಿ  ನಮ್ಮ ನಡುವಿನ ಯುವ ಕಲಾವಿದರ ಬಗ್ಗೆ ಗಣಪತಿ ದಿವಾಣ ಬರೆಯುತ್ತಾರೆ. ಇಲ್ಲಿ ಬರುವ ಕಲಾವಿದರು  ನಿಮ್ಮ ಬದುಕಿಗೂ ಸ್ಪೂರ್ತಿಯಾಗುತ್ತಾರೆ, ಯುವ ಪ್ರತಿಭೆಗಳನ್ನು ಪರಿಚಯಿಸುವ ಈ ಸರಣಿ ನಿಮಗಿಷ್ಟವಾದೀತು ಎನ್ನುವುದು ನಮ್ಮ ನಂಬಿಕೆ. ನಿಮ್ಮ ಸುತ್ತ-ಮುತ್ತ ಇಂತಹ ಯುವಪ್ರತಿಭೆಗಳಿದ್ದರೆ ನಮ್ಮ ಗಮನಕ್ಕೆ ತನ್ನಿ.

ತಾಂತ್ರಿಕ ಸಾಧ್ಯತೆಗಳು ಅಗಾಧವಾಗಿ ಬೆಳೆಯುತ್ತಾ ಇರುವಾಗ ಎಲ್ಲವೂ ಡಿಜಿಟಲೈಸ್ಡ್ ಆಗಿದೆ.  ಓದು, ಬರಹ, ಕಲಿಕೆ, ಶಿಕ್ಷಣವೂ ಈಗಿನ ಲಾಕ್ ಡೌನ್ ಹಂತದಲ್ಲಿ ತಂತ್ರಜ್ಞಾನ ಅವಲಂಬಿಸುವಂತಾಗಿದೆ. ಇಂಥಾ ಸಂದರ್ಭ ಯುವ ಜನರ ಗಮನ ಸೆಳೆಯುತ್ತಿರುವ ಕಲಾಪ್ರಕಾರ ‘ಡಿಜಿಟಲ್ ಆರ್ಟ್’. ಪೇಪರ್ ಹಾಳೆಯ ಮೇಲಿನ ಚಿತ್ರದಷ್ಟೆ ಮೊಬೈಲ್, ಕಂಪ್ಯೂಟರ್ ಪರದೆಯ ಮೇಲೆ ಚಿತ್ರಗಳನ್ನು ಬರೆಯಲೂ ಆಸಕ್ತಿ ತೋರುತ್ತಿದೆ, ಇಂದಿನ ಯುವಜನತೆ.

ಈ ವಿಭಾಗದಲ್ಲಿ ಸ್ವಯಂ ಕಲಿಕೆಯಿಂದ ಬೆಳೆದವರು ಮನೋಜ್ ಶರ್ಮ. ಮನೋಜ್ ಮೂಲತಃ ಶೃಂಗೇರಿಯವರು. ಪ್ರಸ್ತುತ ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಅಂತಿಮ ಬಿಸಿಎ ಅಧ್ಯಯನ ನಡೆಸುತ್ತಿದ್ದಾರೆ. ಮೊದಲಿನಿಂದಲೂ ಪೆನ್ಸಿಲ್ ಸ್ಕೆಚ್, ಕ್ಯಾರಿಕೇಚರ್ ಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ಇವರು ಸದ್ಯ ಡಿಜಿಟಲ್ ಆರ್ಟ್ ವಿಭಾಗದಲ್ಲಿ ಹೊಸ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಫೊಟೊಶಾಪ್, ಅಡೋಬ್ ಇಲ್ಲುಸ್ಟ್ರೇಟರ್ ಮೊದಲಾದ ಅಪ್ಲಿಕೇಶನ್ ಬಳಸಿ ಕಂಪ್ಯೂಟರ್ , ಲ್ಯಾಪ್ ಟಾಪ್ ನಲ್ಲಿ ಚಿತ್ರ ಬರೆಯುತ್ತಾರೆ.

ಮೂರು ವರ್ಷದ ಹಿಂದೆ ಡಿಜಿಟಲ್ ಆರ್ಟ್ ಪ್ರಯತ್ನ ಆರಂಭಿಸಿದೆ. ಮೊದಲು‌ ನನ್ನದೇ ಚಿತ್ರವನ್ನು ಡಿಜಿಟಲ್ ಪೈಂಟ್ ಮಾಡಿದೆ. ಅದು ವಿಭಿನ ಮತ್ತು ವಿಶೇಷವಾಗಿ ಕಂಡಿತು. ಅದನ್ನು ಸಾಮಾಜಿಕ ತಾಣಗಳ ಪ್ರೊಫೈಲ್ ಫೊಟೊ ಮಾಡಿಕೊಂಡೆ. ಅದಕ್ಕೆ ಜನರ, ಗೆಳೆಯರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಕೆಲವು ಗೆಳೆಯರು ತಮಗೂ ಹಾಗೇ ಡಿಜಿಟಲ್ ಚಿತ್ರ ಮಾಡಿಕೊಡುವಂತೆ ಕೇಳಿಕೊಂಡರು. ಹೀಗೆ ಈ ಪಯಣದ ಆರಂಭವಾಯಿತು ಎನ್ನುವುದು ಮನೋಜ್ ಅವರ ನುಡಿ.

ಗೆಳೆಯರಿಗೆ ಕೊಡುಗೆಯಾಗಿ, ಬರ್ತ್ ಡೇ ಉಡುಗೊರೆಯಾಗಿ ಈವರೆಗೆ ಸುಮಾರು 70ಕ್ಕೂ ಹೆಚ್ಚು ಮಂದಿಗೆ ಅವರ ಡಿಜಿಟಲ್ ಚಿತ್ರಗಳನ್ನು ಬಿಡಿಸಿ ಕೊಟ್ಟಿದ್ದಾರೆ ಮನೋಜ್.

ರಘು ದೀಕ್ಷಿತ್ ನನ್ನ ಇಷ್ಟದ ಹಾಡುಗಾರ. ಅವರ ಹುಟ್ಟುಹಬ್ಬಕ್ಕೆ ಒಂದು ಡಿಜಿಟಲ್ ಚಿತ್ರ ಬಿಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದೆ. ಅದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ರಘು ದೀಕ್ಷಿತ್ ಕೂಡ ಪ್ರತಿಕ್ರಿಯಿಸಿದ್ದರು. ಆ ಬಳಿಕ ನನ್ನ ಡಿಜಿಟಲ್ ಚಿತ್ರಗಳಿಗೆ ಬೇಡಿಕೆ ಹೆಚ್ಚಾಯಿತು. ಕೆಲವರು ಡಿಜಿಟಲ್ ಚಿತ್ರದ ಆರ್ಡರ್ ನೀಡಿದರು. ಸಂಭಾವನೆ ನೀಡಿಯೂ ಚಿತ್ರ ಮಾಡಿಸಿಕೊಂಡವರಿದ್ದಾರೆ ಎಂದು ಹೇಳುತ್ತಾರೆ.

ಕಾಲೇಜು, ಕಲಿಕೆಯ ನಡುವೆ ಅಷ್ಟಾಗಿ ಸಮಯ ಸಿಗುತ್ತಿರಲಿಲ್ಲ. ‌ಸಿಕ್ಕ ಸಮಯ ಸಂದರ್ಭಗಳನ್ನು ಹೀಗೆ ಸದುಪಯೋಗ ಮಾಡಿಕೊಂಡೆ. ಇತ್ತೀಚೆಗೆ ಕೊರೊನಾ ಕಾರಣದಿಂದ ಲಾಕ್ ಡೌನ್ ಆಗಿರುವ ಸಮಯದಲ್ಲಿ ಮತ್ತೆ ಹೊಸದಾಗಿ ಈ ಕಲೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಕೆಲವು ಪೋಸ್ಟರ್ ಗಳನ್ನು ರಿಕ್ರಿಯೇಟ್ ಮಾಡಿದೆ. ಕೊರೊನಾ ಜಾಗೃತಿಯ, ಪ್ರಸ್ತುತ ಪರಿಸ್ಥಿತಿಯ ಡಿಜಿಟಲ್ ಚಿತ್ರಗಳನ್ನು ಬಿಡಿಸಿದ್ದೇನೆ. ಸಾಮಾಜಿಕ ಕಳಕಳಿಯ ಚಿತ್ರಗಳನ್ನು ಬಿಡಿಸುವ ಅಭಿಲಾಷೆ ಇದೆ. ಆ ಮಾರ್ಗದಲ್ಲೂ ತೊಡಗಿಕೊಂಡಿದ್ದೇನೆ ಎಂಬ ಮಾತು ಮನೋಜ್ ಅವರದು.

ಮನೋಜ್ ಶರ್ಮ

ಕೈ ಬರಹದ ಮೂಲಕ ಬಿಡಿಸುವ ಚಿತ್ರಕ್ಕೆ ಹೋಲಿಸಿದರೆ ಡಿಜಿಟಲ್ ಆರ್ಟ್ ಸುಲಭ ಎನ್ನಬಹುದು. ಆದರೆ ಬಹಳ ಸಮಯ, ತಾಳ್ಮೆ ಮತ್ತು ಅಭ್ಯಾಸವನ್ನು ಡಿಜಿಟಲ್ ಚಿತ್ರಗಳು ಬಯಸುತ್ತವೆ‌. ನಾನು ಎರಡು ರೀತಿಯಲ್ಲಿಯೂ ಚಿತ್ರ ಬಿಡಿಸಬಲ್ಲೆ. ಡಿಜಿಟಲ್ ಚಿತ್ರಗಳು ಹೆಚ್ಚು ಹೆಸರುಗಳಿಸುತ್ತಿದೆ ಎಂದು ಹೇಳುತ್ತಾರೆ ಬಣ್ಣದ ಕನಸುಗಾರ ಮನೋಜ್:  ಮನೋಜ್ ಸಂಪರ್ಕ ಸಂಖ್ಯೆ  94486 38576

ಬರಹ : ಗಣಪತಿ ದಿವಾಣ

 

 

 

 

 

error: Content is protected !!