ಹೊಸದಿಲ್ಲಿ: ಮಾಜಿ ಪ್ರಧಾನಿ ಡಾ|ಮನಮೋಹನ್ ಸಿಂಗ್‌ಗೆ ನೀಡಲಾಗಿದ್ದ ವಿಶೇಷ ಭದ್ರತಾ ಪಡೆ(ಎಸ್‌ಪಿಜಿ)ಯ ಭದ್ರತೆಯನ್ನು ಕೇಂದ್ರ ಸರ್ಕಾರ ಸೋಮವಾರ ವಾಪಸ್ ಪಡೆದಿದೆ. ಈ ಕುರಿತು ಸೋಮವಾರ ಪ್ರಕಟಣೆ ಹೊರಡಿಸಿದ ಕೇಂದ್ರ ಗೃಹ ಸಚಿವಾಲಯ, ಮಾಜಿ ಪ್ರಧಾನಿ ಡಾ. ಸಿಂಗ್ ಅವರಿಗೆ ಇನ್ನು ಮುಂದಿನ ದಿನಗಳಲ್ಲಿ ಎಸ್‌ಪಿಜಿ ಭದ್ರತೆ ಇರುವುದಿಲ್ಲ. ಆದರೆ ಅವರಿಗೆ ಸಿಆರ್‌ಪಿಎಫ್ ಸಿಬ್ಬಂದಿಗಳ ಮೂಲಕ ಝೆಡ್ ಪ್ಲಸ್ ಭದ್ರತೆ ಮುಂದುವರಿಯಲಿದೆ.
ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ತಮ್ಮ ಅಂಗರಕ್ಷಕರಿಂದಲೇ ಕೊಲೆಗೀಡಾದ ಕಾರಣಕ್ಕಾಗಿ 1985ರಲ್ಲಿ ಗಣ್ಯ ವ್ಯಕ್ತಿಗಳ ಭದ್ರತೆಗಾಗಿ ಎಸ್‌ಪಿಜಿ ವ್ಯವಸ್ಥೆ ಜಾರಿಗೆ ತರಲಾಯಿತು. 1988ರಲ್ಲಿ ದೇಶದ ಪ್ರಧಾನಿಗೆ ಎಸ್‌ಪಿಜಿ ಭದ್ರತೆ ಒದಗಿಸುವ ಕಾನೂನು ರೂಪಿಸಲಾಯಿತು. ಈ ಪ್ರಕಾರ, ರಾಜೀವ್ ಗಾಂಧಿ ಅವರು ಪ್ರಧಾನಿ ಸ್ಥಾನದಿಂದ ಇಳಿದ ಕಾರಣಕ್ಕೆ ಅವರ ಎಸ್‌ಪಿಜಿ ಭದ್ರತೆಯನ್ನು ವಿ.ಪಿ ಸಿಂಗ್ ಸರ್ಕಾರ ವಾಪಸ್ ಪಡೆದಿತ್ತು.
ತಮಿಳುನಾಡಿಗನ ರಾಜಕೀಯ ಕಾರ್ಯಕ್ರಮ ಹೋಗಿದ್ದ ರಾಜೀವ್ 1991ರಲ್ಲಿ ಆತ್ಮಹುತಿ ಬಾಂಬ್ ದಾಳಿಗೆ ಬಲಿಯಾದರು. ಆ ನಂತರ, ಮಾಜಿ ಪ್ರಧಾನಿ ಹಾಗೂ ಅವರ ಕುಟುಂಬಕ್ಕೆ ಕನಿಷ್ಠ 10 ವರ್ಷಗಳ ಕಾಲ ಎಸ್‌ಪಿಜಿ ಭದ್ರತೆ ನೀಡಲು ಅನುವಾಗುವಂತೆ ಕಾನೂನು ತಿದ್ದುಪಡಿ ಮಾಡಲಾಗಿತ್ತು. ಆದರೆ, 2002ರಲ್ಲಿ ಎಸ್‌ಪಿಜಿ ಭದ್ರತೆ ಯಾರಿಗೆಲ್ಲಾ ನೀಡಬೇಕು ಮತ್ತು ಮುಂದುವರಿಸಬೇಕು ಎಂಬುದರ ಬಗ್ಗೆ ಕಾಲ-ಕಾಲಕ್ಕೆ ನಿರ್ಣಯ ಕೈಗೊಳ್ಳುವ ರೀತಿಯಲ್ಲಿ ಕಾನೂನು ರೂಪಿಸಲಾಗಿತ್ತು.
ಇದೀಗ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಅವರಿಗೆ ಎಸ್‌ಪಿಜಿ ಪಡೆಯ ಭದ್ರತೆಯನ್ನು ಒದಗಿಸಲಾಗಿದೆ.