ಉಡುಪಿ ಡಿಸಿ ಶಾಸಕ ಸುನೀಲ್ ಕುಮಾರ್ ಕೈಗೊಂಬೆ: ಮಂಜುನಾಥ ಪೂಜಾರಿ ಆರೋಪ

ಹೆಬ್ರಿ: ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರ ಕೈಗೊಂಬೆ. ಅವರು ಹಾಕಿದ ತಾಳಕ್ಕೆ ತಕ್ಕಂತೆ ಡಿಸಿ ಕುಣಿಯುತ್ತಾರೆ. ಇದರಿಂದ ಜಿಲ್ಲೆಯ ಜನತೆ ಸಂಕಷ್ಟ ಎದುರಿಸುವಂತಾಗಿದೆ ಎಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿ ಮುದ್ರಾಡಿ ಆರೋಪಿಸಿದ್ದಾರೆ.

ಹೆಬ್ರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸಿಯವರು ಬಿಜೆಪಿ ಏಜೆಂಟ್ ರಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಜನಸಾಮಾನ್ಯರ ಕೆಲಸ ಮಾಡುತ್ತಿಲ್ಲ. ಅವರಿಗೆ ಪಕ್ಷದ ಸೇವೆ ಮಾಡುವ ಮನಸಿದ್ದರೆ, ಅದೇ ಪಕ್ಷಕ್ಕೆ ಸೇರಿಕೊಳ್ಳಲಿ ಎಂದು ಡಿಸಿ ವಿರುದ್ಧ ಹರಿಹಾಯ್ದರು.

ಸದ್ಯ ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಆದರೂ ಶನಿವಾರ ಕಾರ್ಕಳ ತಾಲೂಕಿನ ಕಡ್ತಲ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಸೇತುವೆ ಕಾಮಗಾರಿಯನ್ನು ಬಿಜೆಪಿಯ ನಾಯಕರು ಸ್ಥಳೀಯ ಬಿಜೆಪಿ ಕಾರ್ಯಕರ್ತರು ಮತ್ತು ಗ್ರಾಮ‌ ಪಂಚಾಯತ್ ಚುನಾವಣೆಯ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಕರೆದುಕೊಂಡು ಹೋಗಿ ವೀಕ್ಷಣೆ ಮಾಡಿದ್ದಾರೆ. ಇದು ನ್ಯಾಯವೇ?. ನೀತಿಸಂಹಿತೆ ಪಾಲಿಸುವ ಜವಾಬ್ದಾರಿ ವಹಿಸಿರುವ ಜಿಲ್ಲಾಧಿಕಾರಿಯೇ ಈ ರೀತಿ ಮಾಡಿದರೆ ಹೇಗೆ?. ಅವರಿಗೊಂದು ಕಾನೂನು ನಮಗೊಂದು ಕಾನೂನೇ ಎಂದು ಡಿಸಿ ವಿರುದ್ಧ ಪ್ರಶ್ನೆಗಳ ಸುರಿಮಳೆಗೈದರು.

ಡಿಸಿ ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಅವರು ಬಿಜೆಪಿಯ ಕಾರ್ಯಕರ್ತರಿಗೆ ಸೀಮಿತರಾಗಿದ್ದಾರೆ. ಕಂದಾಯ ಸಹಿತ ಯಾವುದೇ ಇಲಾಖೆಯ ಅಧಿಕಾರಿಗಳು ಜನರಿಗೆ ಸ್ಪಂದಿಸುತ್ತಿಲ್ಲ. ನಿಷ್ಪಕ್ಷಪಾತವಾಗಿ ನಡೆದುಕೊಳ್ಳಬೇಕಾದ ಡಿಸಿ ಒಂದು ಪಕ್ಷದ ಏಜೆಂಟ್ ರಂತೆ ವರ್ತಿಸುತ್ತಿದ್ದಾರೆ. ಹೀಗಿರುವಾಗ ಜಿಲ್ಲಾಡಳಿತ ಎಷ್ಟು ನ್ಯಾಯಪರವಾದ ಆಡಳಿತ ನೀಡಲು ಸಾಧ್ಯ ಎಂದು ಪ್ರಶ್ನಿಸಿದ ಅವರು, ಜಿಲ್ಲೆಯಲ್ಲಿ ಎಸ್ಪಿ ಸಹಿತ ಪೊಲೀಸ್ ಇಲಾಖೆ ಮಾತ್ರ ನ್ಯಾಯಪರ, ಜನಪರವಾದ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಮುಖಂಡರಾದ ಗುಳ್ಕಾಡು ಭಾಸ್ಕರ್ ಶೆಟ್ಟಿ, ಶಂಕರ ಶೇರಿಗಾರ್, ಶಶಿಕಲಾ ದಿನೇಶ್ ಪೂಜಾರಿ, ದಿನೇಶ ಶೆಟ್ಟಿ ಇದ್ದರು.