ಉಡುಪಿ: ಬಾವಿಗೆ ಬಿದ್ದ ಚಿರತೆ ಮರಿಯನ್ನು ರಕ್ಷಿಸಿರುವ ಘಟನೆ ಮಣಿಪುರ ಗ್ರಾಮದ ಸಿ.ಎಸ್.ಐ.ಚರ್ಚ್ ಬಳಿ ಮಂಗಳವಾರ ನಡೆದಿದೆ.
ಮಣಿಪುರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜೋನ್ ಸಿಕ್ವೆರಾ ಅವರ ಸಹೋದರ ಜೇಕಬ್ ಸಿಕ್ಕೇರಾ ಅವರ ಮನೆಯ ತೋಟದ ಬಾವಿಯಲ್ಲಿ ಚಿರತೆ ಮರಿಯೊಂದು ಬಾವಿಗೆ ಬಿದ್ದಿದ್ದು, ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿತ್ತು. ಅದರಂತೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಚಿರತೆಯನ್ನು ಬಾವಿಯಿಂದ ರಕ್ಷಿಸಿ ಸೋಮೇಶ್ವರ ಅಭಯಾರಣ್ಯಕ್ಕೆ ಕೊಂಡೊಯ್ಯದ್ದು ಬಿಟ್ಟಿದ್ದಾರೆ.
ಜೇಕಬ್ ಸಿಕ್ಕೇರ ಅವರ ತೋಟದ ಬಾವಿಯ ನೀರಿನ ಪಂಪ್ ಸ್ಟಾರ್ಟ್ ಆಗದೆ ಇದ್ದಾಗ ಮಧ್ಯಾಹ್ನದ ವೇಳೆ ತೆರಳಿ ಪರಿಶೀಲಿಸಿದಾಗ ಚಿರತೆ ಬಾವಿಯಲ್ಲಿ ಇರುವುದು ಕಂಡು ಬಂದಿದೆ.
ಸುಮಾರು 2-3 ವರ್ಷ ಪ್ರಾಯದ ಹೆಣ್ಣು ಚಿರತೆ ಮರಿ ಇದಾಗಿದ್ದು, ಅರಣ್ಯ ಇಲಾಖೆಯವರು ಮತ್ತು ಎನ್ ಜಿ ಒ ಉಡುಪಿಯ ಅಕ್ಷಯ್ ಶೇಟ್ ಹಾಗೂ ಸ್ಥಳೀಯರ ಸಹಕಾರದಿಂದ 2 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಲಾಗಿತ್ತು.
ಆರ್. ಎಫ್. ಒ. ವಾರಿಜಾಕ್ಷಿ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿ ಶಿವಾನಂದ, ಗಸ್ತು ಅರಣ್ಯ ಪಾಲಕರಾದ ದೇವ ರಾಜ್ ಪಾಣ, ರಾಮಚಂದ್ರ ನಾಯಕ್, ಶ್ರೀನಿವಾಸ ಜೋಗಿ, ಮಂಜುನಾಥ, ಅಖಿಲೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.












