ಮಣಿಪಾಲ: ಮೇ 5ರಿಂದ ಗಾಂಧಿಯನ್ ಸೆಂಟರ್‌ನಲ್ಲಿ ಉಡುಪಿ ಸೀರೆಗಳ ಕುರಿತ ಕಾರ್ಯಾಗಾರ ‘ನೇಯ್ಗೆ’

ಡುಪಿ: ಮಾಹೆಯ ಗಾಂಧಿಯನ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್‌ನ ಆಶ್ರಯದಲ್ಲಿ ಉಡುಪಿ ಸೀರೆಗಳ ಕುರಿತು ಎರಡು ದಿನಗಳ ಪ್ರದರ್ಶನ, ಉಪನ್ಯಾಸ, ಸಾಕ್ಷ್ಯಚಿತ್ರ ಪ್ರದರ್ಶನಗಳ ಕಾರ್ಯಾಗಾರ ‘ನೇಯ್ಗೆ’ ಮೇ 5 ಮತ್ತು 6ರಂದು ಮಣಿಪಾಲದಲ್ಲಿ ನಡೆಯಲಿದೆ.

ಈ ಕಾರ್ಯಾಗಾರ ಅಮೆರಿಕದ ಡಿಪಾರ್ಟ್‌ಮೆಂಟ್ ಆಫ್ ಸ್ಟೇಟ್ಸ್‌ನ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಬ್ಯೂರೋ ಆರಂಭಿಸಿದ ‘ಗಾಂಧಿ-ಕಿಂಗ್ ಎಕ್ಸೆಚೇಂಜ್’ ಕಾರ್ಯಕ್ರಮದ ಭಾಗವಾಗಿ ನಡೆಯಲಿದೆ ಎಂದು ಕಾರ್ಯಾ ಗಾರದ ಸಂಘಟಕರಲ್ಲೊಬ್ಬರಾದ ಲಾವಣ್ಯ ಎನ್.ಕೆ. ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಉಡುಪಿ ಸೀರೆ ಮತ್ತು ಸಸ್ಟೈನೇಬಲ್ ಫ್ಯಾಷನ್‌ನ ಮಹತ್ವ ಹಾಗೂ ಜಿಐ ಟ್ಯಾಗ್ ಹೊಂದಿರುವ ಉಡುಪಿ ಸೀರೆಯ ಪ್ರಜ್ಞಾಪೂರ್ವಕ ಬಳಕೆಯ ಬಗ್ಗೆ ಗಮನ ಸೆಳೆಯುವ ಗುರಿಯೊಂದಿಗೆ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಲಾವಣ್ಯ ತಿಳಿಸಿದರು.

ಎರಡು ದಿನಗಳ ಕಾರ್ಯಕ್ರಮದಲ್ಲಿ ವಿವಿಧ ವಿದ್ವಾಂಸರು, ತಜ್ಞರು ಮತ್ತು ನೇಕಾರರಿಂದ ಉಡುಪಿ ಸೀರೆಯೊಂದಿಗೆ ಸುಸ್ಥಿರ ಜೀವನ ಹೇಗೆ ಸಾಧ್ಯ ಎಂಬ ಕುರಿತು ವಿಶೇಷ ಉಪನ್ಯಾಸಗಳು, ಹಲವು ಸಾಕ್ಷ್ಯಚಿತ್ರಗಳ ಪ್ರದರ್ಶನ ಹಾಗೂ ಈ ಕುರಿತ ಚರ್ಚೆ, ಸಂವಾದಗಳು ನಡೆಯಲಿವೆ. ಪರಿಸರ ಸ್ನೇಹಿ ಉಡುಪಿ ಸೀರೆಗಳನ್ನು ಯುವ ಪೀಳಿಗೆಗೆ ಪರಿಚಯಿಸುವ ಪ್ರಯತ್ನವಾಗಿ ಇದನ್ನು ಆಯೋಜಿಸಲಾಗಿದೆ ಎಂದೂ ಅವರು ನುಡಿದರು.

ಕಾರ್ಯಾಗಾರವು ಮಣಿಪಾಲ ಪೊಲೀಸ್ ಠಾಣೆಯ ಬಳಿ ಇರುವ ಮಾಹೆಯ ಗಾಂಧಿಯನ್ ಸೆಂಟರ್‌ನಲ್ಲಿ ಬೆಳಿಗ್ಗೆ 10 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಕಾರ್ಯಕ್ರಮವನ್ನು ಇಂದಿರಾ ಬಲ್ಲಾಳ್ ಉದ್ಘಾಟಿಸಲಿ ದ್ದಾರೆ. ಕಾರ್ಕಳದ ಕದಿಕೆ ಟ್ರಸ್ಟ್‌ನ ಮಮತಾ ರೈ ಅವರು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದು, ಮಾಹೆಯ ಪ್ರೊ ಚಾನ್ಸಲರ್ ಡಾ. ಎಚ್.ಎಸ್.ಬಲ್ಲಾಳ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

ಬಳಿಕ ಸಾಕ್ಷ್ಯಚಿತ್ರದ ಪ್ರದರ್ಶನ ನಡೆಯಲಿದೆ. ಕಾರ್ಯಕ್ರಮವು ಉಡುಪಿ ಸೀರೆಗಳ ಪ್ರದರ್ಶನ, ಸಂಬಂಧಿತ ಛಾಯಾಚಿತ್ರಗಳ ಪ್ರದರ್ಶನ, ನೇಕಾರಿಕೆ ಇತಿಹಾಸ ಕಾರ್ನರ್, ಯಕ್ಷಗಾನ ಕಾನರ್ರ್, ಸ್ಥಳೀಯ ನೇಕಾರರಿಂದ ಉಡುಪಿ ಸೀರೆಗಳ ಪ್ರದರ್ಶನ ಹಾಗೂ ಮಾರಾಟಗಳಿರುತ್ತವೆ ಎಂದರು.

ಮೇ 6ರ ಶುಕ್ರವಾರ ಅಪರಾಹ್ನ 3:30ಕ್ಕೆ ಮಾಹೆಯ ಡಿಪಾರ್ಟ್‌ಮೆಂಟ್ ಆಫ್ ಡಿಸೈನ್‌ನ ಸಂಯೋಜಕಿ ಡಾ. ವೀಣಾ ರಾವ್ ಬಾಳೆ ನಾರಿನಿಂದ ಪರಿಸರ ಸ್ನೇಹಿ ಉಡುಪುಗಳ ತಯಾರಿ ಕುರಿತ ಕಾರ್ಯಾಗಾರವನ್ನು ನಡೆಸಿಕೊಡಲಿದ್ದಾರೆ. ಬಳಿಕ ಸಂಜೆ 5:00 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಮಣಿಪಾಲ ಮಹಿಳಾ ಸಮಾಜದ ಅಧ್ಯಕ್ಷೆ ಡಾ.ಸುಲತಾ ಭಂಡಾರಿ ಆಗಮಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರಾಯ್ಡನ್, ಜಿಸಿಪಿಎಎಸ್‌ನ ವಿದ್ಯಾರ್ಥಿಗಳಾದ ಸಂಪದ, ಅಪರ್ಣ ಹಾಗೂ ಇನಿಯನ್ ಉಪಸ್ಥಿತರಿದ್ದರು.

ಗಾಂಧಿ-ಕಿಂಗ್ ಎಕ್ಸ್‌ಚೇಂಜ್ ಕಾರ್ಯಕ್ರಮ

ಅಮೆರಿಕೆಯ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಬ್ಯೂರೋದಿಂದ ನೀಡಲಾಗುವ ಗಾಂಧಿ-ಕಿಂಗ್ ಫೆಲೋಶಿಪ್‌ನ ಗುರಿ, ನಮ್ಮ ಇತಿಹಾಸವನ್ನು ಅನ್ವೇಷಿಸುವ ಮೂಲಕ ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾಗರಿಕ ಹಕ್ಕುಗಳು, ಸಾಮಾಜಿಕ ನ್ಯಾಯದ ಕುರಿತಂತೆ ಜೊತೆಯಾಗಿ ಕೆಲಸ ಮಾಡಲು ಭಾರತ ಮತ್ತು ಅಮೆರಿಕೆಯ ಯುವನಾಯಕ ರನ್ನು ಪ್ರೇರೇಪಿಸುವುದಾಗಿದೆ.

ಮಹಾತ್ಮಾ ಗಾಂಧಿ ಮತ್ತು ಡಾ. ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಇವರ ಆದರ್ಶಗಳನ್ನು ಪ್ರತಿಪಾದಿಸು ವುದಾಗಿದೆ. ಮಾಹೆ ಗಾಂಧಿಯನ್ ಸೆಂಟರ್‌ನ ಹಳೆ ವಿದ್ಯಾರ್ಥಿಯಾಗಿರುವ ಲಾವಣ್ಯ ಮತ್ತು ಮುಂಬೈನಿಂದ ವಾಣಿಜ್ಯ ಪದವೀಧರರಾಗಿರುವ ರಾಯ್ಡನ್ ಅವರು 2022ನೇ ಸಾಲಿನ ಗಾಂಧಿ-ಕಿಂಗ್ ಫೆಲೋಶಿಪ್‌ಗೆ ಭಾಜನ ರಾಗಿ ಅಮೆರಿಕೆಯ ಅಲಬಾಮಾ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ತರಬೇತಿ ಪಡೆದಿದ್ದು, ಇವರ ನೇತೃತ್ವದಲ್ಲಿ ಕಾರ್ಯಾಗಾರ ನಡೆಯಲಿದೆ.

ಕರಾವಳಿ ಸಂಸ್ಕೃತಿಯ ಭಾಗವಾಗಿರುವ, ಕೈಮಗ್ಗ ನೇಕಾರರು ನೇಯುವ ಉಡುಪಿ ಸೀರೆಗಳು, ಒಂದೇ ಪದರದ ಹತ್ತಿ ನೂಲು ಮತ್ತು ನೈಸರ್ಗಿಕ ಬಣ್ಣಗಳಿಂದ ಮಾಡಿದ ಮತ್ತು ಕೈಯಿಂದ ನೇಯ್ದ ಸೀರೆಗಳಾಗಿವೆ. ಇವು ಯಾವುದೇ ರೀತಿಯ ಪರಿಸರ ಹಾನಿಯನ್ನುಂಟುಮಾಡುವುದಿಲ್ಲ. ಉಡಲು ತುಂಬಾ ಹಗುರವಾಗಿರುತ್ತವೆ ಮತ್ತು ಆರಾಮದಾಯಕವಾಗಿಯೂ ಇರುತ್ತದೆ. ಉಡುಪಿ ಸೀರೆಗಳ ಉತ್ಪಾದನೆಯು ಆರ್ಥಿಕ, ಸಾಮಾಜಿಕ ಮತ್ತು ಪರಿಸರ ಸುಸ್ಥಿರತೆಯ ಕುರಿತು ಕಾರ್ಯಾಗಾರದಲ್ಲಿ ಸಂವಾದವೂ ನಡೆಯಲಿದೆ ಎಂದು ಲಾವಣ್ಯ ತಿಳಿಸಿದರು.