ಉಡುಪಿ: ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಲಿರುವ ಮೊಗವೀರ ಸಮಾಜದ ಗುರು ಪರಂಪರೆಯ 9 ತಲೆಮಾರಿನ ಗುರು ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ನಿರ್ಮಾಣದ ಅಂಗವಾಗಿ ಗುರುಪಾದ ಕಾಣಿಕೆ ಸಮರ್ಪಣಾ ಸಮಾರಂಭ ಮಾ.1ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿದೆ ಎಂದು ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಗೌರವಾಧ್ಯಕ್ಷ ಜಿ.ಶಂಕರ್ ತಿಳಿಸಿದರು.
ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಕ್ಷೇತ್ರದ ಜೀರ್ಣೋದ್ದಾರದ ವೇಳೆ ನಡೆದ ಅಷ್ಟಮಂಗಳ ಪ್ರಶ್ನೆಯಲ್ಲಿ ಬಂದ ಸೂಚನೆಯಂತೆ, ದೇವಸ್ಥಾನದ ಮುಂಭಾಗದಲ್ಲಿ ಸುಮಾರು 3.50 ಕೋಟಿ ರೂ. ವೆಚ್ಚದಲ್ಲಿ 30 ಅಡಿ ಎತ್ತರದ ಕಂಚಿನ ಪುತ್ಥಳಿ ನಿರ್ಮಾಣಗೊಳ್ಳಲಿದೆ. ಪುತ್ಥಳಿ ಸ್ಥಳದಲ್ಲೇ ಗುರುಗಳ ಚಿನ್ನ ಲೇಪಿತ ಪಾದುಕೆಯನ್ನು ಪ್ರತಿಷ್ಠಾಪಿಸುವ ಉದ್ದೇಶವಿದೆ. ಪುತ್ಥಳಿ ಪ್ರತಿಷ್ಠಾಪನೆ ಸಮಾಜದ ಏಕತೆ, ಸ್ವಾಭಿಮಾನ ಹಾಗೂ ಗುರುಭಕ್ತಿಯ ಸಂಕೇತವಾಗಲಿದ್ದು, ಎಲ್ಲಾ ಮೊಗವೀರ ಬಾಂಧವರು ಕಾಣಿಕೆ ನೀಡುವ ಉದ್ದೇಶದಿಂದ ಸಾಂಕೇತಿಕ ಸಾಮೂಹಿಕ ಗುರುಪಾದಕಾಣಿಕೆ ಸಮರ್ಪಣಾ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ವಿವರಿಸಿದರು.
ಯುವಶಕ್ತಿಯ ಬೈಕ್ ಜಾಥಾ:ಬೆಳಗ್ಗೆ 9.30ಕ್ಕೆ ಸುಮಾರು 2 ಸಾವಿರ ದ್ವಿಚಕ್ರ ವಾಹನಗಳ ಜಾಥಾ ಪ್ರಾರಂಭವಾಗಲಿದ್ದು, ಶಿರೂರಿನಿಂದ ಕಾಪುವರೆಗಿನ ಸಮಾಜ ಬಾಂಧವರು ಪಾಂಗಾಳ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಆವರಣದಿಂದ ಹಾಗೂ ಉಪ್ಪಳದಿಂದ ಹೆಜಮಾಡಿವರೆಗಿನ ಬಾಂಧವರು ದಕ್ಷಿಣ ಟೋಲ್ ಪ್ಲಾಜಾದಿಂದ ರಾ.ಹೆ. 66ರಮೂಲಕ ಉಚ್ಚಿಲದ ದೇವಸ್ಥಾನಕ್ಕೆ ಬರುವರು. ಸಭಾ ಕಾರ್ಯಕ್ರಮವು ಬೆಳಗ್ಗೆ 10.30ರಿಂದ ಉಚ್ಚಿಲದ ಶ್ರೀಮತಿ ಶಾಲಿನಿ ಡಾ. ಜಿ. ಶಂಕರ್ ಸಭಾಂಗಣದಲ್ಲಿ ನಡೆಯಲಿದೆ.
ಉಪ್ಪಳದಿಂದ ಶಿರೂರುವರೆಗಿನ 336 ಮೊಗ ವೀರ ಗ್ರಾಮ ಸಭೆಗಳು ಹಾಗೂ ಕೂಡುಕಟ್ಟುಗಳು ಸೇರಿದಂತೆ ದೇಶ-ವಿದೇಶಗಳ ಮೊಗವೀರ ಸಂಘಟನೆ ಗಳಿಂದ 10 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವರು ಎಂದರು.
ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ್ಸುವರ್ಣ, ಪುತ್ಥಳಿ ನಿರ್ಮಾಣ ಸಮಿತಿ ಕಾರ್ಯಾಧ್ಯಕ್ಷ ಮನೋಜ್ ಸಾಲ್ಯಾನ್ ಉಳ್ಳಾಲ, ಮಹಾಜನ ಸಂಘದ ಪ್ರ. ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು ಕೋಶಾಧಿಕಾರಿ ರತ್ನಾಕರ ಸಾಲ್ಯಾನ್ ಮಲ್ಪೆ ಬಾರ್ಕೂರು ಹೋಬಳಿಯ ಸತೀಶ್ ಅಮೀನ್ ಬೆಣ್ಣೆಕುದ್ರು, ಬಗ್ವಾಡಿ ಹೋಬಳಿಯ ಉದಯ ಕುಮಾರ್ ಹಟ್ಟಿಯಂಗಡಿ, ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ರವೀಶ್ ಎಸ್. ಕೊರವಡಿ, ಪುತ್ಥಳಿ ನಿರ್ಮಾಣ ಸಮಿತಿ ಕೋಶಾಧಿಕಾರಿ ದಿನೇಶ್ ಎರ್ಮಾಳು, ಪ್ರಮುಖರಾದ ವಿನಯ ಕರ್ಕೇರ, ಮಲ್ಪೆ ಸುಜಿತ್ ಸಾಲ್ಯಾನ್ ಮೂಲ್ಕಿ ವಾಸುದೇವ ಸಾಲ್ಯಾನ್, ಸುಧಾಕರ್ಕುಂದರ್, ಸತೀಶ್ ಕುಂದರ್ ಮಲ್ಪೆ ಪವನ್ ಆನಂದ್ ಎರ್ಮಾಳು, ಯಜೇಶ್ ಕರ್ಕೇರ ಮಿತ್ರಬೆಟ್ಟು ಕಿಶೋರ್ ಡಿ. ಸುವರ್ಣ ಮಲ್ಪೆ ಕರುಣಾಕರ ಸಾಲ್ಯಾನ್ ಮಲ್ಪೆ ಶಿವಾನಂದ ಕುಂದರ್ ಮಲ್ಪೆ ಮತ್ತಿತರರು ಉಪಸ್ಥಿತರಿದರು.

















