ಉಡುಪಿ: ಉಡುಪಿ ಜಿಲ್ಲಾ ವಿಶೇಷ ಮಕ್ಕಳ ಪೋಷಕರ ಸಂಘದ ಆಶ್ರಯದಲ್ಲಿ ಮಣಿಪಾಲದ ಇಂಡಸ್ಟ್ರಿಯಲ್ ಏರಿಯಾದಲ್ಲಿ ಆರಂಭಿಸಿರುವ “ಬೌದ್ಧಿಕ ವಿಕಲಚೇತನರ ಕೌಶಲಾಭಿವೃದ್ಧಿ ತರಬೇತಿ ಕೇಂದ್ರದ ಉದ್ಘಾಟನೆ ಇದೇ ಸೆ.12ರಂದು ಬೆಳಿಗ್ಗೆ 9.30ಕ್ಕೆ ನಡೆಯಲಿದೆ ಎಂದು ಉಡುಪಿ ಜಿಲ್ಲಾ ವಿಶೇಷ ಮಕ್ಕಳ ಪೋಷಕರ ಸಂಘದ ಅಧ್ಯಕ್ಷ ಕೆ.ಎಸ್. ಜೈ ವಿಠಲ್ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನೂತನ ತರಬೇತಿ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅಧ್ಯಕ್ಷೆ ವಹಿಸಲಿದ್ದಾರೆ.
ಮಣಿಪಾಲ ಮಾಹೆ ಸಹಕುಲಪತಿ ಡಾ. ಕೆ. ಶರತ್ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.ಈ ಕಟ್ಟಡದಲ್ಲಿ ಅರ್ಹ ಬೌದ್ಧಿಕ ವಿಕಲಚೇತನರಿಗೆ ಅಲ್ಪಾವಧಿ ಕೌಶಲಾಭಿವೃದ್ಧಿ ತರಬೇತಿ ಕೋರ್ಸ್ಗಳು, ಟೈಲರಿಂಗ್ ಹಾಗೂ ಕರಕುಶಲ ತರಬೇತಿ ಘಟಕಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಅಲ್ಲದೆ, ಪ್ರಥಮ ಹಂತದಲ್ಲಿ ವಿಶೇಷ ಶಾಲೆಗಳಿಂದ ಹೊರಬಂದ ಪರಿಣತರಿಗೆ ಸ್ಥಳೀಯ ಸಂಪನ್ಮೂಲಗಳ ಆಧಾರದ ಮೇಲೆ ಉತ್ಪಾದನೆ ಆರಂಭಿಸಲು ಪ್ರೋತ್ಸಾಹಿಸಲಾಗುವುದು. ತರಬೇತಿ ಪಡೆಯದ ಅರ್ಹ ಬೌದ್ಧಿಕ ವಿಕಲಚೇತನರಿಗೆ ಅಲ್ಪಾವಧಿ ಕೌಶಲಾಭಿವೃದ್ಧಿ ತರಬೇತಿಯನ್ನು ಸಹ ನೀಡುವ ಉದ್ದೇಶ ಹೊಂದಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ನಿರಂಜನ್ ಭಟ್, ಕಾರ್ಯದರ್ಶಿ ಸಾಧನ ಕಿಣಿ, ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರ ಸಂಘದ ಅಧ್ಯಕ್ಷೆ ಡಾ. ಕಾಂತಿ ಹರೀಶ್ ಉಪಸ್ಥಿತರಿದ್ದರು.

















