ಮಣಿಪಾಲ: ‘ನಮ್ಮ ಮನೆ ನಮ್ಮ ದೇಶ’ ತ್ಯಾಜ್ಯ ವಿಲೇವಾರಿ ಅಭಿಯಾನಕ್ಕೆ ಚಾಲನೆ

ಮಣಿಪಾಲ: ಈಶ್ವರನಗರ ವಾರ್ಡ್ ನಲ್ಲಿ ನಮ್ಮ ಮನೆ ನಮ್ಮ ದೇಶ ಎನ್ನುವ ವಿನೂತನ ಪರಿಕಲ್ಪನೆಯಡಿಯಲ್ಲಿ ಒಣ ಮತ್ತು ಹಸಿ ತ್ಯಾಜ್ಯ ವಿಲೇವಾರಿ ಪ್ರಕ್ರಿಯೆಗೆ ಹೊಸ ವೇಗ ಮತ್ತು ಜೀವ ತುಂಬುವ ನಿಟ್ಟಿನಲ್ಲಿ ಹಮ್ಮಿಕೊಂಡ ಅಭಿಯಾನಕ್ಕೆ ನಗರಸಭಾ ಸದಸ್ಯ ಮಂಜುನಾಥ್ ಮಣಿಪಾಲ ಚಾಲನೆ ನೀಡಿದರು.

ಅಭಿಯಾನದ ಸಂಚಾಲಕ ಹಾಗು ಪೆರಂಪಳ್ಳಿ ಇಂದಿರಾ ಶಿವರಾವ್ ಪೊಲಿಟೆಕ್ನಿಕ್ ನ ಪ್ರಾಂಶುಪಾಲ ಪ್ರಕಾಶ್ ಶೆಣೈ ಅವರು ಮಾತನಾಡಿ, ಇಡೀ ದೇಶವನ್ನು ನಮ್ಮ ಮನೆ ಎಂಬ ಭಾವನೆಯಲ್ಲಿ ಪೂಜಿಸಿ ಗೌರವಿಸಬೇಕು. ಸ್ವಚ್ಛತೆಯನ್ನು ಕೂಡಾ ಇದೇ ಭಾವನೆಯಲ್ಲಿ ಮಾಡಿದಾಗ ಸರಕಾರಗಳು ಹಾಗು ಸಂಘ ಸಂಸ್ಥೆಗಳ ಯೋಜನೆಗಳು ಪರಿಣಾಮಕಾರಿಯಾಗಿ ಫಲಕಾರಿಯಾಗಬಲ್ಲದು ಎಂದು ಹೇಳಿದರು.

ಸ್ವಚ್ಛತಾ ಕಾರ್ಮಿಕರನ್ನು ಇದುವರೆಗೆ ಅತ್ಯಂತ ಅಮಾನವೀಯವಾಗಿ ನಡೆಸಿಕೊಳ್ಳುತ್ತಿದ್ದು ನಿಧಾನಗತಿಯಲ್ಲಿ ಈ ವರ್ತನೆಗಳಿಗೆ ಕಾನೂನಿನ ಚೌಕಟ್ಟಿನಲ್ಲಿ ಶಿಕ್ಷಾರ್ಹ ಅಪರಾಧವಾಗಿ ಪರಿಗಣಿಸಿರುವುದು ಸ್ವಾಗತಾರ್ಹ ಎಂದ ಅವರು,  ಈ ಬಗ್ಗೆ ಸ್ಥಳೀಯ ಸಂಸ್ಥೆಗಳು ಕೂಡ ಇದನ್ನು ಅನುಷ್ಠಾನ ಗೊಳಿಸುವಲ್ಲಿ ಹೆಚ್ಚಿನ ನಿಗಾವಹಿಸಬೇಕು ಎಂದರು.

ಕಾರ್ಯಾಗಾರದಲ್ಲಿ ವಿವಿಧ ರೀತಿಯ ತ್ಯಾಜ್ಯಗಳನ್ನು ವಿಲೇವಾರಿ ಮಾಡುವ ಪ್ರಾತ್ಯಕ್ಷಿತೆಯನ್ನು ಪ್ರಕಾಶ್ ಶೆಣೈ ಯವರು ಪ್ರಸ್ತುತ ಪಡಿಸಿದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಮಾಯಾ ಕಾಮತ್ ಮತ್ತು ಶಿಕ್ಷಕಿ ಸವಿತಾ ಶೆಟ್ಟಿ  ಕಾರ್ಯಕ್ರಮ ಸಂಯೋಜಿಸಿದರು.

ಬೂತ್ ಅಧ್ಯಕ್ಷ ಗಿರೀಶ್, ಸ್ನೇಹಸಂಗಮ ಇದರ ಅಧ್ಯಕ್ಷ ಹರೀಶ್ ಜಿ ಕಲ್ಮಾಡಿ, ಸ್ಥಳೀಯರಾದ ವಿನುತಾ, ವಿಜಯಲಕ್ಷ್ಮಿ, ಆಶಾ, ಬಬಿತಾ, ಮೋಹಿನಿ ಭಟ್, ಮಂಜುನಾಥ್ ಕಾಮತ್, ಉಪನ್ಯಾಸಕ ಶಂಕರ್, ರಮ್ಯಾ ಮತ್ತಿತರರು ಉಪಸ್ಥಿತರಿದ್ದರು.