ಮಣಿಪಾಲ: ವೈಶ್ಯವಾಣಿ ಸಮುದಾಯಕ್ಕೆ ಕೂಡಲೇ ಜಾತಿ ಪ್ರಮಾಣ ನೀಡುವಂತೆ ಆಗ್ರಹಿಸಿ ಧರಣಿ

ಉಡುಪಿ: ವೈಶ್ಯವಾಣಿ ಸಮುದಾಯವನ್ನು ಹಿಂದುಳಿದ ವರ್ಗಕ್ಕೆ (ಒಬಿಸಿ) ಸೇರ್ಪಡೆಗೊಳಿಸಿದ ಸರಕಾರಿ ಆದೇಶದಂತೆ ಗಜೇಟ್ ನೋಟಿಫಿಕೇಶನ್ ಹೊರಡಿಸಿ ಜಾತಿ ಪ್ರಮಾಣ ನೀಡುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ವೈಶ್ಯವಾಣಿ ಸಮಾಜ ಸಮುದಾಯದ ವತಿಯಿಂದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಇಂದು ಧರಣಿ ನಡೆಸಿದರು.

ನೂರಾರು ಸಂಖ್ಯೆ ಸೇರಿದ್ದ ವೈಶ್ಯವಾಣಿ ಸಮುದಾಯದವರು ಕೂಡಲೇ ಒಬಿಸಿ ಜಾತಿ ಪ್ರಮಾಣ ವಿತರಣೆ ಮಾಡಬೇಕು. ಸರಕಾರಿ ಆದೇಶದಂತೆ ವೈಶ್ಯವಾಣಿ ಸಮುದಾಯವನ್ನು ಒಬಿಸಿಗೆ ಸೇರ್ಪಡೆಗೊಳಿಸಿ ಎರಡು ವರ್ಷಗಳೇ ಕಳೆದಿದೆ. ಆದರೂ ನಮ್ಮ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ಒಬಿಸಿ ಮೀಸಲಾತಿ ಸೌಲಭ್ಯ ಪಡೆಯಲು ಅಗತ್ಯವಿರುವ ಜಾತಿ ಪ್ರಮಾಣ ಪತ್ರವನ್ನು ತಹಶೀಲ್ದಾರ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ನೀಡುತ್ತಿಲ್ಲ. ಇದರಿಂದ ನಮ್ಮ ಸಮುದಾಯದ ಸಾವಿರಾರು ಬಡ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಒಳಗಾಗಿದ್ದು, ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು‌ ಆಕ್ರೋಶ ವ್ಯಕ್ತಪಡಿಸಿದರು.

ಉಡುಪಿ ಜಿಲ್ಲಾ ವೈಶ್ಯವಾಣಿ ಸಮಾಜ ಸಮುದಾಯ ಅಧ್ಯಕ್ಷ ವಸಂತ್ ಕೆ. ನಾಯಕ್ ಮಾತನಾಡಿ, ನಮ್ಮ ವೈಶ್ಯವಾಣಿ ಸಮುದಾಯ ಅರ್ಥಿಕವಾಗಿ, ಶೈಕ್ಷಣಿಕವಾಗಿ ಸಾಮಾಜಿಕವಾಗಿ ಹಿಂದುಳಿದ ಸಮುದಾಯವಾಗಿದೆ. ಕರ್ನಾಟಕದಲ್ಲಿ ನಮ್ಮ ಸಮುದಾಯದ ಜನಸಂಖ್ಯೆ ಸುಮಾರು 5 ಲಕ್ಷವಿದೆ. ನಾವು ಕಳೆದ 30 ವರ್ಷಗಳಿಂದ ಹಿಂದುಳಿದ ವರ್ಗಕ್ಕೆ ಸೇರ್ಪಡೆ ಮಾಡಬೇಕೆಂದು ಸರ್ಕಾರವನ್ನು ಆಗ್ರಹಿಸುತ್ತಾ ಬಂದಿದ್ದೇವೆ.

2010ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಡಾ. ಸಿ.ಎಸ್. ದ್ವಾರಕನಾಥ್ ಅವರು ನಮ್ಮ ಸಮುದಾಯದ ಸಮೀಕ್ಷೆ ಹಾಗೂ ಬಹಿರಂಗ ವಿಚಾರಣೆ ನಡೆಸಿ ವೈಶ್ಯವಾಣಿ ಸಮುದಾಯ ಹಾಗೂ ಉಪಜಾತಿಗಳನ್ನು ಒಬಿಸಿ ಪ್ರವರ್ಗ 38 ಗೆ ಸೇರ್ಪಡೆ ಮಾಡಬೇಕೆಂದು ಸರಕಾರಕ್ಕೆ ಶಿಫಾರಸು ಮಾಡಿ ವರದಿ ಸಲ್ಲಿಸಿದ್ದಾರೆ. ಅದೇ ರೀತಿ 2013ರಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಂದಿನ ಅಧ್ಯಕ್ಷ ಎಂ. ಶಂಕ್ರಪ್ಪನವರು ಕೂಡ ನಮ್ಮ ಸಮುದಾಯದ ಸಮೀಕ್ಷೆ ಮಾಡಿ ವೈಶ್ಯ ವಾಣಿ ಸಮುದಾಯವನ್ನು ಒಬಿಸಿ ಪ್ರವರ್ಗ 2ಡಿಗೆ ಸೇರ್ಪಡಿಸಬೇಕೆಂದು ಶಿಫಾರಸ್ಸು ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿರುತ್ತಾರೆ. ಕಳೆದ ವರ್ಷ ಸರ್ಕಾರ ವೈಶ್ಯ ವಾಣಿ ಸಮುದಾಯವನ್ನು ಒಬಿಸಿಗೆ ಸೇರ್ಪಡೆಗೊಳಿಸಿ 2023ರ ಮಾರ್ಚ್ 27ರಂದು ಹೊರಡಿಸಿದ ಸರ್ಕಾರಿ ಆದೇಶ ಜಾರಿಗೆ ಬಾರದೆ ನಮ್ಮ ಸಮುದಾಯದ ವಿದ್ಯಾರ್ಥಿಗಳು/ಅಭ್ಯರ್ಥಿಗಳಿಗೆ ಸೂಕ್ತ ಜಾತಿ ಸರ್ಟಿಫಿಕೇಟ್ ಸಿಗದೇ ಮೀಸಲಾತಿ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ ಎಂದು ದೂರಿದರು.

ಉಡುಪಿ ಜಿಲ್ಲಾ ವೈಶ್ಯವಾಣಿ ಸಮಾಜ ಸಮುದಾಯ ಕುಂದಾಪುರ ತಾಲೂಕು ಅಧ್ಯಕ್ಷ ಗಣೇಶ್ ಶೇಟ್ ನೆಲ್ಲಿಕಟ್ಟೆ, ಕಾರ್ಯದರ್ಶಿ ಶುಭಾಷ್ ಚಂದ್ರ ಶೇಟ್, ನಗರಸಭೆ ಸದಸ್ಯೆ ಮಂಜುಳಾ ವಿ. ನಾಯಕ್ ಮೊದಲಾದವರು ಉಪಸ್ಥಿತರಿದ್ದರು.