ಉಡುಪಿ: ಮಣಿಪಾಲ ಪೊಲೀಸರು ಕಾರ್ಯಾಚರಣೆ ನಡೆಸಿ 22.11 ಗ್ರಾಂ ತೂಕದ 2.30 ಲ.ರೂ. ಮೌಲ್ಯದ ನಿಷೇಧಿತ ಮಾದಕ ದ್ರವ್ಯ ಎಂಡಿಎಂಎ ವಶಕ್ಕೆ ಪಡೆದಿದ್ದಾರೆ. ಓರ್ವ ವಿದ್ಯಾರ್ಥಿ ಸೇರಿದಂತೆ 3 ಮಂದಿ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಲಾಗಿದೆ.
ಮೂಲತಃ ಮಹಾರಾಷ್ಟ್ರ ನಿವಾಸಿ, ಮಣಿಪಾಲದ ಎಂಐಟಿ ವಿದ್ಯಾರ್ಥಿ ಅಕ್ಷಯ್ ಕುಮಾವತ್ (36) ಬೆಂಗಳೂರಿನ ಸರ್ಜಾಪುರ ನಿವಾಸಿ ಶ್ರೀನಿವಾಸ ಗೌಡ (31), ಬಾಣಸವಾಡಿ ನಿವಾಸಿ ಐಸಾಕ್ ಶ್ಯಾಮ್ (29) ಬಂಧಿತರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಗಳು ಉಡುಪಿ ಮತ್ತು ಮಣಿಪಾಲ ನಗರದ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯಗಳನ್ನು ಸರಬರಾಜು ಮಾಡುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ತನಿಖೆ ಮುಂದುವರಿದಿದೆ.
ಚುನಾವಣೆ ಹಿನ್ನೆಲೆಯಲ್ಲಿ ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಸಾಗಾಟ ಮತ್ತು ಮಾರಾಟ ಜಾಲದ ಬಗ್ಗೆ ಪೊಲೀಸರ ತಂಡ ಮಣಿಪಾಲ ಹಾಗೂ ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಿ ಡ್ರಗ್ ಪೆಡ್ಲರ್‌ಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಎ. 24ರಂದು ಮಣಿಪಾಲದ ಈಶ್ವರನಗರದ ಅಕ್ಷಯ್ ವಾಸವಿರುವ ಜನತಾ ಟವರ್‌ನ ಎದುರು ಭಾಗದ ಸಾರ್ವಜನಿಕ ಸ್ಥಳದಲ್ಲಿ ದಾಳಿ ಮಾಡಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚೀಂದ್ರ ಅವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಲಿಂಗಪ್ಪ ಟಿ.ಕೆ. ಅವರು ತಮ್ಮ ತಂಡದ ಸದಸ್ಯರಾದ ಉಡುಪಿ ಡಿವೈಎಸ್‌ಪಿ ದಿನಕರ ಕೆ.ಪಿ., ಮಣಿಪಾಲ ಠಾಣೆಯ ಇನ್‌ಸ್ಪೆಕ್ಟರ್ ದೇವರಾಜ ಟಿ.ವಿ., ಪಿಎಸ್‌ಐ ನವೀನ್ ನಾಯ್ಕ, ಸಿಬಂದಿ ಥಾಮ್ಸನ್, ಅಬ್ದುಲ್ ರಜಾಕ್, ಸಲ್ಮಾನ್ ಖಾನ್, ಚೆನ್ನೇಶ್ ಕೆ., ರೇವಣಸಿದ್ಧ, ಮಹಾಬಲೇಶ್ವರ ಅವರನ್ನೊಳಗೊಂಡ ತಂಡ ಯಶಸ್ವಿಯಾಗಿ ಕಾರ್ಯಾಚರಣೆ ಮಾಡಿದೆ. ಮಣಿಪಾಲ ಪೊಲೀಸರ ತಂಡವನ್ನು ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿಗಳು ಪ್ರಶಂಸಿಸಿದ್ದಾರೆ.