ಉಡುಪಿ: ನಾಲ್ಕು ದಶಕಗಳಿಗೂ ಹೆಚ್ಚು ಕಾಲ ವೈದ್ಯಕೀಯ ಸೇವೆ ನೀಡುತ್ತಿರುವ ಮಹಾತ್ಮಾ ಗಾಂಧೀಜಿಯವರಿಗೆ ಚಿಕಿತ್ಸೆ ನೀಡಿದ್ದ ಪಂಡಿತ ತಾರಾನಾಥರ ಶಿಷ್ಯ ದಿ| ಡಾ| ಯು. ಕೃಷ್ಣ ಮುನಿಯಾಲು ಅವರ ಪ್ರೇರಣೆಯಿಂದ ಡಾ| ಯು. ಕೃಷ್ಣ ಮುನಿಯಾಲು ಸಂಸ್ಮರಣ ಟ್ರಸ್ಟ್ ನಿಂದ 1998ರಲ್ಲಿ ಮಣಿಪಾಲದಲ್ಲಿ ಸ್ಥಾಪಿಸಲ್ಪಟ್ಟ ಮುನಿಯಾಲು ಆಯುರ್ವೇದ ಕಾಲೇಜು ಗುಣಮಟ್ಟದ ಆಯುರ್ವೇದ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ.
ವಿಶಾಲ, ಸುಸಜ್ಜಿತ ಕಟ್ಟಡದಲ್ಲಿರುವ ಸಂಸ್ಥೆಯ ಆವರಣದಲ್ಲಿ ಮುನಿಯಾಲು ಆಯುರ್ವೇದ ಆಸ್ಪತ್ರೆ, ಸಂಶೋಧನ ಕೇಂದ್ರಗಳಿವೆ. ಕಾಲೇಜಿನಲ್ಲಿ ಪ್ರಸ್ತುತ ಐದೂವರೆ ವರ್ಷ ಅವಧಿಯ ಬಿಎಎಂಎಸ್ ಪದವಿ, 3 ವರ್ಷಗಳ ಸ್ನಾತಕೋತ್ತರ (ಎಂಡಿ/ಎಂಎಸ್) ತರಗತಿಗಳನ್ನು ನಡೆಸಲಾಗುತ್ತಿದೆ. ಬಿಎಎಂಎಸ್‌ನಲ್ಲಿ 100 ಸೀಟುಗಳ ಪ್ರವೇಶಕ್ಕೆ ಅವಕಾಶವಿದ್ದು, ಸ್ನಾತಕೋತ್ತರ ವಿಭಾಗದಲ್ಲಿ ಕಾಯ ಚಿಕಿತ್ಸಾ, ಪಂಚಕರ್ಮ, ಶಲ್ಯತಂತ್ರ, ರಸಶಾಸ್ತ್ರ ಮತ್ತು ಭೈಷಜ್ಯ ಕಲ್ಪನ, ದ್ರವಗುಣ ವಿಭಾಗಗಳಲ್ಲಿ ಒಟ್ಟು 29 ಸೀಟುಗಳು ಲಭ್ಯವಿವೆ. ಈ ಎಲ್ಲ ಕೋರ್ಸ್‌ಗಳು ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ, ದಿಲ್ಲಿಯ ಭಾರತೀಯ ಚಿಕಿತ್ಸಾ ಕೇಂದ್ರೀಯ ಪರಿಷದ್ (ಸಿಸಿಐಎಂ), ಆಯುಷ್ ಮಂತ್ರಾಲಯಗಳಿಂದ ಅಧಿಕೃತ ಮಾನ್ಯತೆ ಹೊಂದಿವೆ.
ವಿದ್ಯಾರ್ಥಿಗಳನ್ನು ಆಯುರ್ವೇದ ದಲ್ಲಿ ಸಂಶೋಧನಾತ್ಮಕ ಅಧ್ಯಯನ ಮಾಡುವತ್ತ ಪ್ರೋತ್ಸಾಹಿಸಲಾಗುತ್ತಿದೆ. ಐದು ದಶಕಗಳಿಗೂ ಹೆಚ್ಚು ಪರಂಪರಾನುಗತ ಆಯುರ್ವೇದ ಚಿಕಿತ್ಸೆಯ ಅನುಭವವಿರುವ ಕುಟುಂಬ ಚಿಕಿತ್ಸಾ ಕೌಶಲವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಸಂಸ್ಥೆ ಪ್ರಮುಖ ಪಾತ್ರ ವಹಿಸುತ್ತಿದೆ.
150 ಹಾಸಿಗೆಗಳ ಸುಸಜ್ಜಿತ ಆಯುರ್ವೇದ ಆಸ್ಪತ್ರೆ, ಸಂಶೋಧನ ಕೇಂದ್ರ, ಔಷಧ ಸಸ್ಯೋದ್ಯಾನ, ಔಷಧ ತಯಾರಿಕೆ ಘಟಕ, ಸಂಶೋಧನ ಕೇಂದ್ರಗಳು ಇಲ್ಲಿವೆ. ಸಂಸ್ಥೆಯು ಐಎಸ್‌ಒ ಪ್ರಮಾಣಪತ್ರ ಪಡೆದಿರುವ ಔಷಧ ತಯಾರಿಕೆ ಘಟಕ, ಸಂಶೋಧನ ಕೇಂದ್ರದ ಮೂಲಕ ಅನೇಕ ಕಠಿನ ಕಾಯಿಲೆಗಳಿಗೆ ಪರಿಣಾಮಕಾರಿ ಸಂಶೋಧಿತ ಔಷಧ ಗಳನ್ನು ತಯಾರಿಸುತ್ತಿದೆ.
ಈ ಕೇಂದ್ರದಿಂದ 150ಕ್ಕೂ ಹೆಚ್ಚು ಶಾಸ್ತ್ರೀಯ, ಮಧುಮೇಹ, ಹೃದ್ರೋಗ, ಕ್ಯಾನ್ಸರ್, ಮೂತ್ರಪಿಂಡ ಕಾಯಿಲೆ, ಪಾರ್ಕಿನ್ಸನ್, ಅಲ್ಜೀಮರ್ಸ್ ವ್ಯಾಧಿ ಮೊದಲಾದ ಸಮಸ್ಯೆಗಳಿಗೆ 60ಕ್ಕೂ ಹೆಚ್ಚು ಸಂಶೋಧಿತ ಔಷಧಗಳನ್ನು ಉತ್ಪಾದಿಸಲಾಗುತ್ತಿದೆ. ಸಂಸ್ಥೆಯ ಎಂಡಿ ಡಾ| ಎಂ.ವಿ. ಶೆಟ್ಟಿ ಅವರಿಗೆ ಅಂತಾರಾಷ್ಟ್ರೀಯ ಎಥ್ನೊಫಾರ್ಮ ಕಾಲಜಿ ಸಂಸ್ಥೆ ಪ್ರತಿಷ್ಠಿತ ‘ಎಥ್ನೊಫಾರ್ಮ ಕಾಲಜಿ ಪ್ರಶಸ್ತಿ’ ನೀಡಿ ಗೌರವಿಸಿದೆ ಎಂದು ಕಾಲೇಜಿನ ಪ್ರಕಟನೆ ತಿಳಿಸಿದೆ.












