ಯುವತಿಯರರು ಸ್ಕ್ವಾಷ್ ಕ್ರೀಡೆಗೆ ಆಸಕ್ತಿ‌ ತೋರುವುದು ಉತ್ತಮ ಬೆಳವಣಿಗೆ: ರವಿದೀಕ್ಷಿತ್ 

ಉಡುಪಿ: ಪ್ರಸ್ತುತ ದಿನಗಳಲ್ಲಿ ಯುವತಿಯರು ಸ್ಕ್ವಾಷ್‌ ಕ್ರೀಡೆಯ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಅಂತರರಾಷ್ಟ್ರೀಯ ಸ್ಕ್ವಾಷ್‌ ಆಟಗಾರ ರವಿದೀಕ್ಷಿತ್‌ ಹೇಳಿದರು.
ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ)ಯ ವತಿಯಿಂದ ಮಣಿಪಾಲದ ಮರೀನಾ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ ಮೂರು ದಿನಗಳ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಟ್ಟದ ಮಹಿಳಾ ಸ್ಕ್ವಾಷ್‌ ಚಾಂಪಿಯನ್‌ಶಿಪ್‌ ಟೂರ್ನಮೆಂಟ್‌ ಅನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.
ಯುವತಿಯರು ಕಾಲೇಜು ವಿದ್ಯಾಭ್ಯಾಸದವರೆಗೆ ಮಾತ್ರ ಸ್ಕ್ವಾಷ್‌ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದು, ಕಾಲೇಜು ಶಿಕ್ಷಣ ಮುಗಿದ ಬಳಿಕ ದೂರ ಉಳಿಯುತ್ತಾರೆ. ಇದು ಸ್ಕ್ವಾಷ್‌ ಕ್ರೀಡೆಯ ಬೆಳವಣಿಗೆ ಮೇಲೆ ಪರಿಣಾಮ ಬೀರಿದೆ. ಹಾಗಾಗಿ ಹುಡುಗಿಯರು ಕಾಲೇಜು ಶಿಕ್ಷಣ ಮುಗಿದ ಬಳಿಕವೂ ಸ್ಕ್ವಾಷ್‌ಅನ್ನು ವೃತ್ತಿಪರ ಕ್ರೀಡೆಯನ್ನಾಗಿ ಸ್ವೀಕರಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾಹೆಯ ಸಹಕುಲಪತಿ ಡಾ. ಎಚ್‌.ಎಸ್‌. ಬಲ್ಲಾಳ್‌ ಮಾತನಾಡಿ, ಕ್ರೀಡೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಸಮತೋಲನವನ್ನು ಕಾಯ್ದುಕೊಳ್ಳಬಹುದು. ಈ ನಿಟ್ಟಿನಲ್ಲಿ ಮಾಹೆ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ ಎಂದರು.
ಮಾಹೆಯ ಉಪಕುಲಪತಿ ಡಾ. ಪೂರ್ಣಿಮಾ ಬಾಳಿಗಾ ಮಾತನಾಡಿ, ವಿದ್ಯಾರ್ಥಿಗಳನ್ನು ಅಡ್ಡ ದಾರಿ ಹಿಡಿಯದಂತೆ ತಡೆಯುವಲ್ಲಿ ಕ್ರೀಡೆ ಸಹಕಾರಿಯಾಗಿದೆ ಎಂದರು. ನಮ್ಮ ದೇಶದಲ್ಲಿ 1.3 ಬಿಲಿಯನ್‌ ಜನರು ಇದ್ದಾರೆ. ಆದರೆ ಒಲಿಂಪಿಕ್ಸ್‌ನಲ್ಲಿ ಕೇವಲ
ಮೂರು ಪದಕಗಳನ್ನು ಮಾತ್ರ ಗಳಿಸಲು ಸಾಧ್ಯವಾಗುತ್ತಿದೆ. ನಮ್ಮ ದೇಶ ಮಧುಮೇಹ ಹಾಗೂ ಹೃದ್ರೋಗದ ರಾಜಧಾನಿ ಆಗುತ್ತಿದೆ. ಇದು ಖುಷಿಯ ವಿಚಾರ ಅಲ್ಲ. ಇದನ್ನು ತಡೆಗಟ್ಟಬೇಕಾದರೆ ಕ್ರೀಡೆಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಸಂಘಟಕ ಫಿಡ್ಡಿ ಡೇವಿಸ್‌ ಅಭಿಪ್ರಾಯಪಟ್ಟರು.
ಸಹ ಸಂಘಟಕ ಎಚ್‌. ಶ್ರೀಧರ್‌ ಉಪಸ್ಥಿತರಿದ್ದರು. ಮಾಹೆ ಕ್ರೀಡಾಧಿಕಾರಿ ಡಾ. ವಿನೋದ್‌ ನಾಯಕ್‌ ಸ್ವಾಗತಿಸಿದರು. ಶೋಭಾ ಕಾರ್ಯಕ್ರಮ ನಿರೂಪಿಸಿದರು. ಟೂರ್ನಿಯಲ್ಲಿ 25 ಮಹಿಳಾ ತಂಡಗಳು ಭಾಗವಹಿಸಿದ್ದವು.