ಉಡುಪಿ: ಗುಣಮಟ್ಟದ ಶಿಕ್ಷಣದಲ್ಲಿ ಅಂತಾರಾಷ್ಟ್ರೀಯ ಅವಕಾಶಗಳಿವೆ ಎಂದು ಮಣಿಪಾಲ ಮಾಹೆ ವಿ.ವಿ.ಯ ಸಹಕುಲಾಧಿಪತಿ ಡಾ| ಎಚ್. ಎಸ್. ಬಲ್ಲಾಳ್ ಹೇಳಿದರು.
ಮಣಿಪಾಲದಲ್ಲಿ ಶುಕ್ರವಾರ ಮಣಿಪಾಲ್ ಯುನಿವರ್ಸಲ್ ಪ್ರಸ್‌ನ (ಎಂಯುಪಿ) 155ನೇ ಪ್ರಕಾಶನವಾದ ‘ಇಂಟರ್‌ನ್ಯಾಶನಲೈಸೇಶನ್ ಆಫ್ ಹೈಯರ್ ಎಜುಕೇಶನ್: ದಿ ಡೈನಾಮಿಕ್ಸ್ ಆಫ್ ಎಜುಕೇಶನಲ್ ಇಕಾಲಜಿ’ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಶಿಕ್ಷಣದ ಅಂತಾರಾಷ್ಟ್ರೀಕರಣದ ಪಾತ್ರವನ್ನು ಪುಸ್ತಕ ಪ್ರತಿಫಲಿಸುತ್ತಿದೆ. ಇದಕ್ಕೆ ಪೂರಕವಾಗಿ ವಿದೇಶಗಳ ವಿ.ವಿ.ಗಳೊಂದಿಗೆ ವಿನಿಮಯ, ಟ್ವಿನ್ನಿಂಗ್ ಕಾರ್ಯಕ್ರಮಗಳು, ವಿದ್ಯಾರ್ಥಿ ವಿನಿಮಯ ಇತ್ಯಾದಿ ಕಾರ್ಯಕ್ರಮಗಳನ್ನು ಮಾಹೆ ವಿ.ವಿ. ಜಾರಿಗೊಳಿಸಿದೆ ಎಂದವರು ಹೇಳಿದರು.
ಡಾ| ವಿನೋದ ಭಟ್ ಮಾತನಾಡಿ, ಶಿಕ್ಷಣದ ಅಂತಾರಾಷ್ಟ್ರೀಕರಣವು ಆರ್ಥಿಕ ಮತ್ತು ಶೈಕ್ಷಣಿಕ ಗುರಿ ಸಾಧಿಸಲು ನೆರವಾಗುತ್ತದೆ. ಮಣಿಪಾಲದ ಅಂತಾರಾಷ್ಟ್ರೀಕರಣದ ನೈಜ ಶಿಲ್ಪಿ ಡಾ| ಟಿಎಂಎ ಪೈಯವರು. ಅವರು ಅಂದು ಹಾಕಿದ ಭದ್ರ ಬುನಾದಿಯಿಂದ ಇಂದು ನೇಪಾಲ, ಮಲೇಶ್ಯ, ಯುಎಇ, ಆಂಟಿಗುವಾ ಮೊದಲಾದೆಡೆ ಕ್ಯಾಂಪಸ್ ತೆರೆಯಲು ಸಾಧ್ಯವಾಯಿತು ಎಂದು ಹೇಳಿದರು.
ಡಾ| ನೀತಾ ಇನಾಂದಾರ್ ಮಾತನಾಡಿ, ಪುಸ್ತಕದಲ್ಲಿ 7 ಅಂತಾರಾಷ್ಟ್ರೀಯ ಸ್ತರದ ವಿದ್ವಾಂಸರನ್ನು ಒಳಗೊಂಡು ಒಟ್ಟು 18 ಹಿರಿಯ ವಿದ್ವಾಂಸರ ಅಧ್ಯಾಯಗಳಿವೆ. ಮುನ್ನೋಟ, ಅನುಷ್ಠಾನ, ಅನುಭವದ ಥೀಮ್‌ಗಳನ್ನು ಹೊಂದಿದೆ ಎಂದು ಹೇಳಿದರು.
ಪುಸ್ತಕವನ್ನು ಸಂಪಾದಿಸಿದ ಮಾಹೆ ಕುಲಪತಿ ಡಾ| ಎಚ್. ವಿನೋದ ಭಟ್ ಮತ್ತು ಮಣಿಪಾಲ್ ಸೆಂಟರ್ ಫಾರ್ ಯೂರೋಪಿಯನ್ ಸ್ಟಡೀಸ್ ಮುಖ್ಯಸ್ಥೆ ಮತ್ತು ಎಂಯುಪಿ ಮುಖ್ಯ ಸಂಪಾದಕಿ ಡಾ| ನೀತಾ ಇನಾಂದಾರ್ ಉಪಸ್ಥಿತರಿದ್ದರು.
ಎಂಯುಪಿ ಸಂಪಾದಕೀಯ ಸಮನ್ವಯಕಾರರಾದ ತಾನಿಮಾ ನಿಗಮ್ ಸ್ವಾಗತಿಸಿ ಭಾಷಾ ವಿಭಾಗದ ಮುಖ್ಯಸ್ಥ ರಾಹುಲ್ ಪುಟ್ಟಿ ಕಾರ್ಯಕ್ರಮ ನಿರ್ವಹಿಸಿದರು.












