ಮಣಿಪಾಲ: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಆಡಳಿತ ಮಂಡಳಿಯು ಕರೋನಾ ವೈರಸ್ (ಕೋವಿಡ್ – 19) ಅನ್ನು ತಡೆಗಟ್ಟುವ ಮುನ್ನೆಚ್ಚರಿಕೆಯ ಕ್ರಮವಾಗಿ, ತತ್ಕ್ಷಣದಿಂದ ಜಾರಿಗೆ ಬರುವಂತೆ ಎಲ್ಲಾ ಹೊರರೋಗಿ ವಿಭಾಗಗಳನ್ನು ಬೆಳಿಗ್ಗೆ 8.30ರಿಂದ ಮಧ್ಯಾಹ್ನ 1.00ರ ನಡುವೆ ಮಾತ್ರ ಕಾರ್ಯನಿರ್ವಹಿಸಲು ನಿರ್ಧರಿಸಿದೆ.
ವೈದ್ಯಕೀಯ ತುರ್ತು / ಎಮರ್ಜೆನ್ಸಿ ಸೇವೆಗಳಿಗಾಗಿ ಮಾತ್ರ ಆಸ್ಪತ್ರೆಗೆ ಭೇಟಿ ನೀಡುವಂತೆ ಸಾರ್ವಜನಿಕರಿಗೆ ಈ ಮೂಲಕ ಸೂಚಿಸಲಾಗಿದೆ. ಎಲ್ಲಾ ಪೂರ್ವ ನಿಯೋಜಿತ ಭೇಟಿಗಳನ್ನು ಮುಂದೂಡಬೇಕು ಎಂದೂ ಈ ಮೂಲಕ ಸೂಚಿಸಲಾಗಿದೆ.
ಒಳ ರೋಗಿಗಳೊಂದಿಗೆ ಒಬ್ಬರಿಗೆ ಮಾತ್ರ ಇರಲು ಅವಕಾಶ ಕಲ್ಪಿಸಲಾಗಿದೆ. ತೀವ್ರ ನಿಘಾ ಘಟಕಗಳಿಗೆ (ಐಸಿಯು) ಪ್ರವೇಶ, ಶಸ್ತ್ರಚಿಕಿತ್ಸೆಯ ನಂತರದ ತೀವ್ರ ನಿಗಾ ಘಟಕಗಳ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ತುರ್ತು ಚಿಕಿತ್ಸಾ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಲಿದೆ. ಹಿರಿಯ ನಾಗರಿಕರು ಮತ್ತು ಮಕ್ಕಳು ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಮಾತ್ರ ಆಸ್ಪತ್ರೆಗೆ ಭೇಟಿ ನೀಡುವಂತೆ ವಿನಂತಿಸಲಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ತಿಳಿಸಿದ್ದಾರೆ.