ಮಣಿಪಾಲ: ಮಣಿಪಾಲ ಕೆಎಂಸಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ಸಮೀಪದಲ್ಲಿದ್ದ ಬೃಹತ್ ಹಳೆಯ ಮರವೊಂದು ಶುಕ್ರವಾರ ಅಪರಾಹ್ನ ಉರುಳಿ ಬಿದ್ದ ಪರಿಣಾಮ ನಾಲ್ಕು ಕಾರುಗಳು ಜಖಂ ಆಗಿದೆ.
ತುರ್ತು ಚಿಕಿತ್ಸಾ ಘಟಕದ ಎಡ ಬದಿಯ ಪಾರ್ಕಿಂಗ್ ಪ್ರದೇಶದಲ್ಲಿರುವ ಹಳೆಯದಾದ ಮೇ ಫ್ಲವರ್ ಮರ ಹಠತ್ತಾನೆ ಬುಡ ಸಮೇತವಾಗಿ ಧರೆಗೆ ಉರುಳಿ ಬಿತ್ತೆನ್ನಲಾಗಿದೆ. ಇದರಿಂದ ಅದರ ಅಡಿಯಲ್ಲಿ ಪಾರ್ಕ್ ಮಾಡಲಾಗಿದ್ದ ನಾಲ್ಕು ಕಾರುಗಳು ಜಖಂಗೊಂಡಿವೆ.
ಎರಡು ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಮತ್ತೆ ಎರಡು ಕಾರುಗಳಿಗೆ ಅಲ್ಪಸ್ವಲ್ಪ ಹಾನಿಯಾಗಿದೆ ಎನ್ನಲಾಗಿದೆ.
ಈ ಕಾರುಗಳಲ್ಲಿ ಎರಡು ಕಾರು ವೈದ್ಯರಾಗಿದ್ದು, ಉಳಿದ ಎರಡು ಕಾರು ಯಾರದ್ದು ಎಂಬುದು ಈವರೆಗೆ ತಿಳಿದುಬಂದಿಲ್ಲ. ಘಟನೆಯಿಂದ ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಮರ ಆಸ್ಪತ್ರೆಯ ಕಟ್ಟಡದ ಮೇಲೆ ಬಿದ್ದ ಪರಿಣಾಮ ಎರಡನೆ ಮಹಡಿ ಯಲ್ಲಿದ್ದ ಸಿಮೆಂಟ್ ಶೀಟ್‌ಗೆ ಹಾನಿಯಾಗಿದೆ. ಸ್ಥಳಕ್ಕೆ ತಕ್ಷಣವೇ ಆಗಮಿಸಿದ ಉಡುಪಿ ಅಗ್ನಿಶಾಮಕ ದಳದ ಎಂಟು ಮಂದಿ ಸಿಬ್ಬಂದಿಗಳು, ಪೊಲೀಸರು ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಸುಮಾರು ಎರಡು ತಾಸುಗಳ ನಿರಂತರ ಕಾರ್ಯಾಚರಣೆಯಿಂದ ಮರವನ್ನು ತೆರವುಗೊಳಿಸಿದರು.