ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಿಂದ ಟೆಲಿಮೆಡಿಸಿನ್ ಸೌಲಭ್ಯ 

ಮಣಿಪಾಲ: ಕಸ್ತೂರ್ಬಾ ಆಸ್ಪತ್ರೆ ಮಣಿಪಾಲವು  ಏಪ್ರಿಲ್ 2 ರಿಂದ ಜಾರಿಗೆ ಬರುವಂತೆ ಈಗಾಗಲೇ ಚಿಕಿತ್ಸೆಯಲ್ಲಿರುವ ಮತ್ತು ತನ್ನ ಹಳೆಯರೋಗಿಗಳ ಅನುಕೂಲಕ್ಕಾಗಿ, ಟೆಲಿಮೆಡಿಸಿನ್ ಮೂಲಕ ಸಮಾಲೋಚನೆಯನ್ನು ಪರಿಚಯಿಸಲಿದೆ ಎಂದು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಅವಿನಾಶ್ ಶೆಟ್ಟಿ ಹೇಳಿದ್ದಾರೆ.
ಕರೋನಾ ವೈರಸ್ (ಕೋವಿಡ್ – 19) ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಹಲವು ನಿರ್ಬಂಧಗಳಿರುವುದರಿಂದ, ನಮ್ಮ ಹೆಚ್ಚಿನ ರೋಗಿಗಳು ವೈದ್ಯರೊಂದಿಗೆ ಸಮಯೋಚಿತ ಸಮಾಲೋಚನೆ ಮತ್ತು ಮರು ಸಮಾಲೋಚನೆಯಿಂದ ವಂಚಿತರಾಗಿದ್ದಾರೆ. ಈ ಸಂಗತಿಯನ್ನು ಅರಿತುಕೊಂಡು, ನಮ್ಮ ರೋಗಿಗಳಿಗೆ ಸಮಾಲೋಚನೆ ಮತ್ತು ಮರು ಸಮಾಲೋಚನೆಯನ್ನು ನೀಡುವುದನ್ನು ಟೆಲಿಮೆಡಿಸಿನ್ ಸೇವೆಗಳ ಮೂಲಕ ಪರಿಚಯಿಸಲು ಕಸ್ತೂರ್ಬಾ ಆಸ್ಪತ್ರೆಯ ಆಡಳಿತ ಮಂಡಳಿ ನಿರ್ಧರಿಸಿದೆ. ಈ ಸೇವೆಯಡಿಯಲ್ಲಿ ಜನರು ತಮ್ಮ ಮನೆಯಲ್ಲಿ ಕುಳಿತು ವೈದ್ಯರನ್ನು ಸಂಪರ್ಕಿಸಬಹುದು.
ವೈದ್ಯರು ದೂರವಾಣಿ ಮೂಲಕ ಸಮಾಲೋಚನೆ ಮತ್ತು ವೈದ್ಯಕೀಯ ಸಲಹೆಯನ್ನು ನೀಡಲಿದ್ದಾರೆ. ಬೆಳಿಗ್ಗೆ 9.00 ರಿಂದ ಸಂಜೆ 4.00 ರವರೆಗೆ ದೂರವಾಣಿ ಕರೆ ಮಾಡುವುದರ ಮೂಲಕ ಎಲ್ಲಾ ವಿಭಾಗದ ವೈದ್ಯರನ್ನು ಸಂಪರ್ಕಿಸಬಹುದು. ಸಂಪರ್ಕಿಸಲು 080 47192235ಗೆ ಕರೆ ಮಾಡಬೇಕಾಗಿ ವಿನಂತಿ. ಆದಾಗ್ಯೂ ಜ್ವರದ ಚಿಕಿತ್ಸಾಲಯ ಮತ್ತು ತುರ್ತು ಚಿಕಿತ್ಸಾ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಲಿದೆ ಎಂದವರು ತಿಳಿಸಿದ್ದಾರೆ.