ಮಣಿಪಾಲ: ಮನೆಯೊಳಗೆ ಪ್ರವೇಶಿಸಿ ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿದ ಘಟನೆ ಹೆರ್ಗ ಗ್ರಾಮದ ಶೆಟ್ಟಿಬೆಟ್ಟು ಮಾರುತಿ ನಗರದಲ್ಲಿ ನಡೆದಿದೆ.
ಹೆರ್ಗ ಗ್ರಾಮದ ಶೆಟ್ಟಿಬೆಟ್ಟು ಮಾರುತಿ ನಗರದ ನಿವಾಸಿ ಸಂದೀಪ್ ಹಲ್ಲೆಗೊಳಗಾದ ವ್ಯಕ್ತಿ. ಈ ಹಿಂದೆ ಸಂದೀಪ್ ಅವರು ಈಶ್ವರನಗರದ ಹರೀಶ್ ಪೂಜಾರಿ ಎಂಬವರ ಜೊತೆಗೂಡಿ ಉಡುಪಿಯಲ್ಲಿ ಬಟ್ಟೆ ಅಂಗಡಿ ವ್ಯವಹಾರ ನಡೆಸುತ್ತಿದ್ದರು. ಇದೇ ವಿಚಾರದಲ್ಲಿ ಇಬ್ಬರ ಮಧ್ಯೆ ವೈಮನಸ್ಸು ಉಂಟಾಗಿತ್ತು ಎನ್ನಲಾಗಿದೆ.
ನ.24ರಂದು ಬೆಳಿಗ್ಗೆ ಹರೀಶ್ ಪೂಜಾರಿ, ಸಂದೀಪ್ ಮನೆಯ ಅಂಗಳಕ್ಕೆ ಬಂದು ಮನೆಯ ಕಾಲಿಂಗ್ ಬೆಲ್ ಹಾಕಿದ್ದಾನೆ. ಆಗ ಸಂದೀಪ್ ಬಾಗಿಲು ತೆರೆದು ಹೊರಗೆ ಬರುತ್ತಿದ್ದಾಗ ಅವರನ್ನು ದೂಡಿಕೊಂಡು ಮನೆಯೊಳಗೆ ಬಂದ ಹರೀಶ್ ” ಏನು ನನ್ನಲ್ಲಿ ದುಡ್ಡು ಕೇಳುತ್ತೀಯಾ, ನಿನಗೆ ಹಣ ಕೊಡುವುದಿಲ್ಲ ಏನು ಮಾಡುತ್ತೀಯಾ” ಎಂದು ಹೇಳಿ, ಸಂದೀಪ್ ಅವರ ಕಾಲರ್ ಹಿಡಿದು ಮರದ ರೀಪಿನಿಂದ ಹೊಡೆದು ಕೊಂದೇ ಬಿಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.
ಆಗ ಸಂದೀಪ್ ಸಹೋದರ ಭರತ್ ಎದ್ದು ಬಂದಿದ್ದು, ಆತನಿಗೂ ಹರೀಶ್ ಹೊಡೆಯಲು ಬಂದಿದ್ದಾನೆ. ಗಲಾಟೆಯ ಶಬ್ದ ಕೇಳಿ ಅಕ್ಕಪಕ್ಕದ ಮನೆಯವರು ಬಂದಿದ್ದರು. ಆಗ ನಿಮ್ಮನ್ನು ಮುಂದೆ ನೋಡಿಕೊಳ್ಳುತ್ತೇನೆಂದು ಹೇಳಿ ಹರೀಶ್ ಅಲ್ಲಿಂದ ಹೋಗಿದ್ದಾನೆ. ಈ ಬಗ್ಗೆ ಸಂದೀಪ್ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.