ಮಣಿಪಾಲ: ಮಾ.27ರಂದು MSDC’ಯಲ್ಲಿ ಮಹಿಳಾ ಉದ್ಯಮಿಗಳಿಗಾಗಿ ಡಿಜಿಟಲ್‌ ಸಬಲೀಕರಣ ಕಾರ್ಯಕ್ರಮ

ಉಡುಪಿ: ಮಣಿಪಾಲದ ಈಶ್ವರ ನಗರದಲ್ಲಿರುವ ಡಾ. ಟಿ.ಎಂ.ಎ. ಪೈ ಪಾಲಿಟೆಕ್ನಿಕ್‌, ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ (MSDC)ದಲ್ಲಿ ಯುಬಿಯುಎನ್ ಟಿಯು ಕನ್ಸೋರ್ಟಿಯಂ ಹಾಗೂ ಉಡುಪಿಯ ಪವರ್‌ ಸಂಸ್ಥೆಯ ವತಿಯಿಂದ ಮಹಿಳಾ ಉದ್ಯಮಿಗಳಿಗಾಗಿ ಡಿಜಿಟಲ್‌ ಸಬಲೀಕರಣ ಕಾರ್ಯಕ್ರಮ ಇದೇ 27ರಂದು ಬೆಳಿಗ್ಗೆ 10 ರಿಂದ 4 ಗಂಟೆಯವರೆಗೆ ನಡೆಯಲಿದೆ ಎಂದು ಪವರ್‌ ಸಂಸ್ಥೆಯ ಸಂಸ್ಥಾಪಕಿ ರೇಣು ಜಯರಾಮ್‌ ಮತ್ತು ಅಧ್ಯಕ್ಷೆ ವೀಣಾ ಕುಡ್ವಾ ತಿಳಿಸಿದರು.

ಈ‌ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮಹಿಳೆಯರು ಸಾಮಾಜಿಕ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ತಮ್ಮ ವ್ಯವಹಾರವನ್ನು ವೃದ್ಧಿಸಿಕೊಳ್ಳಲು ಅಗತ್ಯವಾದ ಕೌಶಲಗಳನ್ನು ನೀಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಹೇಳಿದರು.

ಬ್ರ್ಯಾಂಡ್‌ ನಿರ್ಮಾಣ, ವಿಷಯ ರಚನೆ, ಗ್ರಾಹಕರೊಂದಿಗೆ ಸಂವಹನ ಹಾಗೂ ಡಿಜಿಟಲ್‌ ಮಾರ್ಕೆಟಿಂಗ್‌ ತಂತ್ರಗಳ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಗುವುದು ಎಂದು ಅವರು ತಿಳಿಸಿದರು.

ಮಹಿಳಾ ಉದ್ಯಮಿಗಳು ತಮ್ಮ ವ್ಯವಹಾರವನ್ನು ಡಿಜಿಟಲ್‌ ವೇದಿಕೆಯಲ್ಲಿ ಬಲಪಡಿಸಿ, ಹೊಸ ಗ್ರಾಹಕರನ್ನು ಆಕರ್ಷಿಸಿ, ಆದಾಯವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು. ನೋಂದಣಿ ಪ್ರಕ್ರಿಯೆ ಆರಂಭಗೊಂಡಿದ್ದು, ಭಾಗವಹಿಸುವವರಿಗೆ ಪ್ರಮಾಣ ಪತ್ರ, ಊಟ, ಉಪಹಾರ ನೀಡಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಎಂ ಎಸ್ ಡಿ ಸಿ ಓರೇನ್(School of Beauty of Wellness)ನ ಸೆಂಟರ್ ಮುಖ್ಯಸ್ಥೆ ನೀತಾ ಶೆಟ್ಟಿ, ಸುಜಯಾ ಶೆಟ್ಟಿ, ಪ್ರತಿಭಾ ರವಿ, ಶಾಲಿನಿ ಬಂಗೇರ, ರೇಣು ಜಯರಾಮ್‌, ಉಪಸ್ಥಿತರಿದ್ದರು.