ಮಣಿಪಾಲ: ಮಾರ್ಪಾಡುಗೊಳಿಸಿದ ಫ್ಯಾಶನ್ ಸೈಲೆನ್ಸರ್ ಅಳವಡಿಸಿಕೊಂಡು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ದ್ವಿಚಕ್ರ ವಾಹನ ಸವಾರರ ವಿರುದ್ಧ ಮಣಿಪಾಲ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದ 71 ವಿವಿಧ ಫ್ಯಾಶನ್ ಸೈಲೆನ್ಸರ್ ಗಳನ್ನು ರೋಲರ್ ಅಡಿಗೆ ಹಾಕಿ ಸೋಮವಾರ ನಾಶಗೊಳಿಸಲಾಯಿತು.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ವಿಷ್ಣುವರ್ಧನ್ ಅವರು, ಮಣಿಪಾಲದ ಸಾರ್ವಜನಿಕರ ದೂರಿನ ಮೇರೆಗೆ ಮಣಿಪಾಲ ಪೊಲೀಸರು ಜ.10 ರಿಂದ ಜ.25 ರ ವರೆಗೆ ಶಬ್ದಮಾಲಿನ್ಯ ಉಂಟು ಮಾಡುವ ದ್ವಿಚಕ್ರ ವಾಹನಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಮಾರ್ಪಾಡುಗೊಳಿಸಿದ ಫ್ಯಾಶನ್ ಸೈಲೆನ್ಸರ್ ಗಳನ್ನು ವಾಹನ ಸವಾರರಿಂದ ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ದಂಡ ವಿಧಿಸಿದ್ದಾರೆ. ಈ ಸೈಲೆನ್ಸರ್ ಗಳನ್ನು ವಾಪಸ್ಸು ನೀಡಿದರೆ ವಾಹನ ಸವಾರರು ಮರುಬಳಕೆ ಮಾಡುವ ಸಾಧ್ಯತೆ ಇರುವುದರಿಂದ ಅವುಗಳನ್ನು ಇಂದು ನಿಷ್ಕ್ರಿಯಗೊಳಿಸಲಾಯಿತು ಎಂದು ತಿಳಿಸಿದ್ದಾರೆ.
ವಾಹನ ತಯಾರಿಕಾ ಕಂಪನಿಯಿಂದ ಬರುವ ಸೈಲೆನ್ಸರ್ ನ್ನು ಸ್ಥಳೀಯವಾಗಿ ಬದಲಾಯಿಸಿ ಸೈಲೆನ್ಸರನ್ನು ಅಳವಡಿಸಿಕೊಳ್ಳುವುದರಿಂದ ಉಂಟಾಗುವ ಕರ್ಕಶ ಶಬ್ದದಿಂದ ಶಬ್ದ ಮಾಲಿನ್ಯ ಉಂಟಾಗುತ್ತಿದೆ. ಈ ರೀತಿ ಕಿರಿಕಿರಿ ಉಂಟು ಮಾಡುತ್ತಿರುವ ಸವಾರರ ವಿರುದ್ಧ ಸಾರ್ವಜನಿಕರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಣಿಪಾಲ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ವಾಹನ ತಪಾಸಣೆ ನಡೆಸಿ ಮಾರ್ಪಾಡುಗೊಂಡಿರುವ ಸೈಲೆನ್ಸರ್ ಅಳವಡಿಸಿದ್ದ 71 ದ್ವಿಚಕ್ರ ವಾಹನಗಳ ಸವಾರರ ವಿರುದ್ಧ ಪ್ರಕರಣ ದಾಖಲಿಸಿ ವಸೂಲಿ ಮಾಡಿದ್ದಾರೆ ಹೇಳಿದರು.
ನಗರದಲ್ಲಿ ಉಂಟಾಗುವ ಶಬ್ದಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿ ವರ್ಷ ಈ ಕಾರ್ಯಾಚರಣೆ ನಡೆಸಲಾಗುತ್ತದೆ. ಕಳೆದ ಬಾರಿ ನಡೆದ ಕಾರ್ಯಾಚರಣೆಯಲ್ಲಿ ವಾಹನ ಸವಾರರಿಂದ ಮಾರ್ಪಾಡುಗೊಳಿಸಿದ 51 ಸೈಲೆನ್ಸರ್ ಗಳನ್ನು ವಶಕ್ಕೆ ಪಡೆಯಲಾಗಿತ್ತು. ಬಳಿಕ ಅದನ್ನು ನಾಶಗೊಳಿಸಲಾಗಿತ್ತು ಎಂದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ಸದಾನಂದ ನಾಯ್ಕ್, ಮಣಿಪಾಲ ಠಾಣೆಯ ಇನ್ಸ್ಪೆಕ್ಟರ್ ಮಂಜುನಾಥ್, ಠಾಣಾಧಿಕಾರಿಗಳಾದ ರಾಜ್ ಶೇಖರ್, ಸುಧಾಕರ್ ತೋನ್ಸೆ ಸೇರಿದಂತೆ ಇತರ ಪೊಲೀಸ್ ಅಧಿಕಾರಿ ಉಪಸ್ಥಿತರಿದ್ದರು.