ಮಣಿಪಾಲದ ಕುಂಡೇಲುಕಾಡಿನಲ್ಲಿ ಭೂ ಕುಸಿತ: ಅಪಾಯದ ಭೀತಿಯಲ್ಲಿ ಪ್ರಿಮಿಯರ್ ಕೋರ್ಟ್ ವಸತಿ ಸಮುಚ್ಚಯ

ಮಣಿಪಾಲ: ಕಳೆದ ಎರಡು ದಿನಗಳಿಂದ ಸುರಿದ ಭಾರೀ ಮಳೆಗೆ ಮಣಿಪಾಲದ ಕುಂಡೇಲುಕಾಡಿನಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ಇದರಿಂದ ಇಲ್ಲಿನ ಪ್ರಿಮಿಯರ್ ಕೋರ್ಟ್ ಬಹುಮಹಡಿ ಕಟ್ಟಡ ಅಪಾಯದ ಭೀತಿಯನ್ನು ಎದುರಿಸುತ್ತಿದೆ.

ಹತ್ತು ಅಂತಸ್ತನ್ನು ಹೊಂದಿರುವ ಈ ಬಹುಮಹಡಿ ಕಟ್ಟಡದಲ್ಲಿ ನೂರಾರು ಫ್ಲ್ಯಾಟ್ ಗಳಿದ್ದು, ಸುಮಾರು ಸಾವಿರಕ್ಕೂ ಹೆಚ್ಚುಮಂದಿ ವಾಸವಾಗಿದ್ದಾರೆ ಎನ್ನಲಾಗಿದೆ. ಕಟ್ಟಡದ ಒಂದು ಭಾಗದಲ್ಲಿ ಮಣ್ಣು ಕುಸಿದಿರುವುದರಿಂದ ವಸತಿ ಸಮುಚ್ಚಯದ ನಿವಾಸಿಗಳನ್ನು ಸ್ಥಳಾಂತರ ಮಾಡುವಂತೆ ನಗರಸಭೆ ಪೌರಾಯುಕ್ತ ಆನಂದ ಕಲ್ಲೋಳಿಕ್ಕರ್ ಕಟ್ಟಡದ ಮಾಲೀಕರಿಗೆ ಸೂಚನೆ ನೀಡಿದ್ದಾರೆ.

ಈ ಕಟ್ಟಡದ ಕೆಲಭಾಗದಲ್ಲಿ ರೆಸ್ಟೋರೆಂಟ್ ಹಾಗೂ ವಿವಿಧ ಅಂಗಡಿಗಳಿವೆ. ಕಟ್ಟಡ ಕುಸಿತದ ಭೀತಿಯನ್ನು ಎದುರಿಸುತ್ತಿರುವುದರಿಂದ ತಕ್ಷಣವೇ ಖಾಲಿ ಮಾಡುವಂತೆ ಅಂಗಡಿ ಮಾಲೀಕರಿಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಅಪಾಯದಲ್ಲಿ ಹಲವು ಕಟ್ಟಡ.?
ಈ ವಸತಿ ಸಮುಚ್ಚಯದ ಜೊತೆಗೆ ಕೆಳಭಾಗದಲ್ಲಿರುವ ಐನಾಕ್ಸ್ ಚಿತ್ರಮಂದಿರ ಸಹಿತ ಇತರ ಮೂರು ಬಹುಮಹಡಿ ಕಟ್ಟಡಗಳು ಅಪಾಯದಲ್ಲಿ ಸಿಲುಕಿಕೊಂಡಿವೆ.

ಹಿಂದೆಯೂ ಜರಿದಿತ್ತು ಗುಡ್ಡ?

ನಾಲ್ಕೈದು ವರ್ಷಗಳ ಹಿಂದೆಯೂ ಇಲ್ಲಿ ಭೂ ಕುಸಿತ ಉಂಟಾಗಿತ್ತು. ರಸ್ತೆ ಸಹಿತ ಐನಾಕ್ಸ್ ಚಿತ್ರಮಂದಿರ ಮುಂದಿನ ಪ್ರದೇಶದಲ್ಲಿ ಮಣ್ಣು ಜರಿದಿತ್ತು. ಎರಡ್ಮೂರು ತಿಂಗಳ ಕಾಲ ಚಿತ್ರ ಮಂದಿರ ಬಂದ್ ಮಾಡಲಾಗಿತ್ತು. ಈಗ ಮತ್ತೆ ದೊಡ್ಡಮಟ್ಟದಲ್ಲಿ ಭೂ ಕುಸಿತ ಉಂಟಾಗಿದ್ದು, ಇದರಿಂದ ಮೂರ್ನಾಲ್ಕು ಬಹುಮಹಡಿ ಕಟ್ಟಡ, ಕಮರ್ಷಿಯಲ್ ಕಾಂಪ್ಲೆಕ್ಸ್ ಗಳು ಅಪಾಯದ ಭೀತಿಯನ್ನು ಎದುರಿಸುತ್ತಿವೆ.
ದಟ್ಟವಾಗಿ ಬೆಳೆದಿದ್ದ ಕಾಡನ್ನು ಕಡಿದು ಇಲ್ಲಿ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಮಳೆ ನೀರು ಹರಿದುಹೋಗುತ್ತಿದ್ದ ಜಾಗದಲ್ಲೇ ಬಹುಮಹಡಿ ಕಟ್ಟಡ ನಿರ್ಮಿಸಿದ ಪರಿಣಾಮ ಈಗ ಭೂ ಕುಸಿತ ಉಂಟಾಗುತ್ತಿದೆ.