ಮಣಿಪಾಲ: ಟೆಸ್ಟ್ ಡ್ರೈವ್ ಗೆ ಹೋಗಿ ಬರುತ್ತೇನೆಂದು ಬೈಕ್ ಜತೆ ಪರಾರಿಯಾದ ಅಪರಿಚಿತ

ಮಣಿಪಾಲ: ಬೈಕ್ ಖರೀದಿಸುವ ಸೋಗಿನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ಟೆಸ್ಟ್ ಡ್ರೈವ್‌ ಗೆ ಹೋಗಿ ಬರುತ್ತೇನೆಂದು ಬೈಕ್ ವೊಂದನ್ನು ಕದ್ದುಕೊಂಡು ಹೋದ ಘಟನೆ ಮಣಿಪಾಲ ಲಕ್ಷ್ಮೀಂದ್ರನಗರದ ನ್ಯೂ ಮಣಿಪಾಲ್ ಬಜಾರಿನಲ್ಲಿ ಇಂದು ಮಧ್ಯಾಹ್ನ ನಡೆದಿದೆ.
ಅಪರಿಚಿತ ವ್ಯಕ್ತಿ 2017 ಮಾಡೆಲ್ ನ ಟಿವಿಎಸ್ ವಿಕ್ಟರ್ (ಕೆಎ 19 ಇಯು 6827) ನೋಂದಣಿ ಸಂಖ್ಯೆಯ ಬೈಕ್ ಅನ್ನು ಕದ್ದುಕೊಂಡು ಪರಾರಿಯಾಗಿದ್ದಾನೆ. ಮಧ್ಯಾಹ್ನ 2.45ರ ಸುಮಾರಿಗೆ ಬಜಾರ್ ಗೆ ಬಂದ ಅಪರಿಚಿತ ವ್ಯಕ್ತಿಯು ಬೈಕ್ ಖರೀದಿಸುವಂತೆ ನಟಿಸಿದ್ದಾನೆ. ಅಲ್ಲದೆ ಬಜಾರ್ ಒಳಗೆ ಬಂದು ಕೆಲವು ಬೈಕ್ ಗಳನ್ನು ನೋಡಿದ್ದಾನೆ. ಬಳಿಕ ಬಜಾರ್ ಮುಂಭಾಗ ಮಾರಾಟ ಮಾಡಲು ಇಟ್ಟಿದ್ದ ಟಿವಿಎಸ್ ವಿಕ್ಟರ್ ಬೈಕ್ ಅನ್ನು ನೋಡಿದ್ದು, ನಾನು ಒಮ್ಮೆ ಟೆಸ್ಟ್ ಡ್ರೈವ್ ಗೆ ಹೋಗಿಬರುತ್ತೇನೆ. ಬೈಕ್ ಕಂಡಿಷನ್ ನೋಡುತ್ತೇನೆಂದು ಹೋದವನು ವಾಪಸ್ ಬಜಾರ್ ಗೆ ಬಾರದೆ ಪರಾರಿಯಾಗಿದ್ದಾನೆ ಎಂದು ಬಜಾರ್ ಮಾಲೀಕ ಪ್ರಶಾಂತ್ ಕುಮಾರ್ ಉಡುಪಿ ಎಕ್ಸ್‌ಪ್ರೆಸ್‌ ಗೆ ತಿಳಿಸಿದ್ದಾರೆ.
ಈ ಬೈಕ್ ಎಲ್ಲಿಯಾದರೂ ಕಂಡರೆ ಮೊಬೈಲ್ ಸಂಖ್ಯೆ 95385 28070, 97432 88336 ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.