ಉಡುಪಿ: ಮಂಗನ ಕಾಯಿಲೆಗೆ ತುತ್ತಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಶಾಸಕ ಕೆ. ರಘುಪತಿ ಭಟ್ ಸೋಮವಾರ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ರೋಗಿಗಳ ವಾರ್ಡ್ ಗೆ ಖುದ್ದಾಗಿ ತೆರಳಿದ ಶಾಸಕರು, ರೋಗಿಗಳ ಆರೋಗ್ಯವನ್ನು ವಿಚಾರಿಸಿದರು. ಆ ಬಳಿಕ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಅವಿನಾಶ್ ಶೆಟ್ಟಿ ಹಾಗೂ ಚಿಕಿತ್ಸೆ ನೀಡುತ್ತಿರುವ ವೈದ್ಯರ ತಂಡವನ್ನು ಭೇಟಿ ಮಾಡಿ ಚರ್ಚಿಸಿದರು.
ರೋಗಿಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಿ. ಸರ್ಕಾರದಿಂದ ಯಾವುದೇ ಸಹಕಾರ ನೀಡಲು ನಾವು ಸಿದ್ಧರಿದ್ದೇವೆ ಎಂದು ಶಾಸಕರು ಹೇಳಿದರು. ರೋಗಿಗಳ ಸಂಬಂಧಿಕರಿಗೆ ಇಂದಿರಾ ಕ್ಯಾಂಟಿನ್ ನಿಂದಲೇ ಆಹಾರ ಒದಗಿಸುವಂತೆ ಸೂಚಿಸಿದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಪೈಕಿ ಬಹುತೇಕರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನವರಾಗಿದ್ದಾರೆ ಎಂದು ತಿಳಿದುಬಂದಿದೆ.