ಮಂಗಳೂರು: ಎರಡು ದಿನದಲ್ಲಿ ಬ್ಯಾಂಕ್ ಖಾತೆಯಿಂದ ರೂ.1.44 ಲಕ್ಷ ಮಾಯ; ಆನ್‌ಲೈನ್ ವಂಚನೆ ಕುರಿತು ದೂರು ನೀಡಿದ ವ್ಯಕ್ತಿ

ಮಂಗಳೂರು: ಅಪರಿಚಿತರು ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ಎರಡು ದಿನಗಳ ಅಂತರದಲ್ಲಿ ಹಂತ ಹಂತವಾಗಿ ಒಟ್ಟು ₹1,44,999 ವರ್ಗಾಯಿಸಿಕೊಂಡು ಆನ್‌ಲೈನ್ ವಂಚನೆ ನಡೆಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಈ ಕುರಿತು 55 ವರ್ಷದ ವ್ಯಕ್ತಿಯೊಬ್ಬರು ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರುದಾರರು ನ.17ರಂದು ಪರಿಚಯದವರಿಗೆ ಹಣ ವರ್ಗಾಯಿಸುವ ಉದ್ದೇಶದಿಂದ ಫೋನ್‌ಪೇ ತೆರೆದು ವಹಿವಾಟಿನ ವಿವರ ಪರಿಶೀಲಿಸಿದ್ದಾರೆ. ಈ ವೇಳೆ ಅವರ ಬ್ಯಾಂಕ್ ಖಾತೆಯಿಂದ ₹70,000 ಅಪರಿಚಿತ ಖಾತೆಗೆ ವರ್ಗಾವಣೆಯಾಗಿರುವುದು ಗಮನಕ್ಕೆ ಬಂದಿದೆ.

ಕೂಡಲೇ ಬ್ಯಾಂಕ್‌ಗೆ ತೆರಳಿ ವಿಚಾರಿಸಿದಾಗ ಸೈಬರ್ ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸುವಂತೆ ಸೂಚಿಸಲಾಗಿದೆ. ಅದರಂತೆ ದೂರು ದಾಖಲಿಸಿ ಸ್ವೀಕೃತಿ ಸಂಖ್ಯೆಯನ್ನೂ ಪಡೆದುಕೊಂಡಿದ್ದಾರೆ.

ಆದರೆ, ನ.18ರಂದು ಮತ್ತೆ ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಮತ್ತೊಮ್ಮೆ ₹74,999 ಅಪರಿಚಿತ ಖಾತೆಗೆ ವರ್ಗಾವಣೆಯಾಗಿರುವುದು ಕಂಡುಬಂದಿದೆ. ತಕ್ಷಣ ಬ್ಯಾಂಕ್‌ಗೆ ಕರೆ ಮಾಡಿ ಖಾತೆಯನ್ನು ಬ್ಲಾಕ್ ಮಾಡಿಸಿದ್ದು, ಸೈಬರ್ ಸಹಾಯವಾಣಿ 1930ಕ್ಕೆ ಕರೆ ಮಾಡಿ ಮತ್ತೊಂದು ದೂರು ದಾಖಲಿಸಿದ್ದಾರೆ.

ಹೀಗೆ ಎರಡು ದಿನಗಳಲ್ಲಿ ಒಟ್ಟು ₹1,44,999 ಹಣವನ್ನು ಅಪರಿಚಿತರು ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಈ ಕೃತ್ಯ ಎಸಗಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಂತ್ರಸ್ತರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಒತ್ತಾಯಿಸಿದ್ದಾರೆ.