ಭಾರತದ ಪರಂಪರೆ ಜಗತ್ತಿಗೆ ಸಾರಿದ ಮಹಾನ್ ವ್ಯಕ್ತಿ ವಿವೇಕಾನಂದರು: ಸುಪ್ರಸಾದ್ ಬೈಕಾಡಿ

ಉಡುಪಿ: ಸ್ವಾಮಿ ವಿವೇಕಾನಂದರು ಭಾರತದ ಆಚಾರ–ವಿಚಾರ, ಪರಂಪರೆಯನ್ನು ಇಡೀ ಜಗತ್ತಿಗೆ ಸಾರಿದ ಮಹಾನ್‌ ವ್ಯಕ್ತಿ. ತನ್ನ ಅಲ್ಪಾವಧಿಯ ಜೀವಿತಾವಧಿಯಲ್ಲಿ ಜಗತ್ತು ಸ್ವೀಕಾರ ಮಾಡಬಹುದಾದ ಆದರ್ಶ, ಚಿಂತನೆಗಳನ್ನು ಬಿಟ್ಟು ಹೋಗಿದ್ದಾರೆ ಎಂದು ವಕೀಲ ಬೈಕಾಡಿ ಸುಪ್ರಸಾದ್‌ ಶೆಟ್ಟಿ ಹೇಳಿದರು.

ಉಡುಪಿ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ‌ ಸ್ವಾಮಿ ವಿವೇಕಾನಂದರ ಜಯಂತಿಯ ಪ್ರಯುಕ್ತ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಮಾತನಾಡಿದರು.

ಸಮಾಜದ ಕಟ್ಟಕಡೆಯ ವ್ಯಕ್ತಿಯ ನೋವುಗಳಿಗೆ ಸ್ಪಂದಿಸುವ ಮನೋಭಾವವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ವಿವೇಕಾನಂದರ ಆದರ್ಶಗಳು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಪ್ರೇರಣೆ ಆಗಿದೆ ಎಂದರು.  ಕಾಲೇಜಿನ ಉಪಪ್ರಾಂಶುಪಾಲ ಸಂದೀಪ್‌ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಕಾರ್ತಿಕ್‌ ಜಿ. ಕುಂದರ್‌ ಉಪಸ್ಥಿತರಿದ್ದರು.
ಎನ್‌ಎಸ್‌ಎಸ್‌ ಯೋಜನಾಧಿಕಾರಿ ರಮಾನಂದ ರಾವ್‌ ಕಾರ್ಯಕ್ರಮ ಸಂಯೋಜಿಸಿದರು. ವಿದ್ಯಾರ್ಥಿನಿ ದಿಶಾ ಕಾರ್ಯಕ್ರಮ ನಿರೂಪಿಸಿದರು. ಯೋಜನಾಧಿಕಾರಿ ಶ್ರೀಲತಾ ಆಚಾರ್ಯ ವಂದಿಸಿದರು.