ಮಂಗಳೂರು MRPL ಸ್ಫೋಟ ದುರಂತ: ಚಿಕಿತ್ಸೆ ಫಲಿಸದೆ ಮತ್ತೊಬ್ಬ ಕಾರ್ಮಿಕ ಸಾವು; ಮೃತರ ಸಂಖ್ಯೆ 2ಕ್ಕೆ ಏರಿಕೆ

ಮಂಗಳೂರು: ನಗರದ ಎಂಆರ್‌ಪಿಎಲ್ (MRPL) ತೈಲ ಶುದ್ಧೀಕರಣ ಘಟಕದಲ್ಲಿ ಸೆಪ್ಟೆಂಬರ್ 30ರಂದು ಸಂಭವಿಸಿದ್ದ ಭೀಕರ ಸ್ಫೋಟ ಮತ್ತು ಅಗ್ನಿ ದುರಂತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮತ್ತೊಬ್ಬ ಗುತ್ತಿಗೆ ಕಾರ್ಮಿಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇದರೊಂದಿಗೆ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಎರಡಕ್ಕೆ ಏರಿಕೆಯಾಗಿದೆ.

ಮೃತರನ್ನು ಸುರತ್ಕಲ್‌ನ ಇಡ್ಯಾ ಗ್ರಾಮದ ಕಾನಾ ನಿವಾಸಿ ರಾಜೇಶ್ ಡಿ’ಸಿಲ್ವಾ ಎಂದು ಗುರುತಿಸಲಾಗಿದೆ. ಅವರು ಹಲವು ವರ್ಷಗಳಿಂದ ಎಂಆರ್‌ಪಿಎಲ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ಸ್ಫೋಟದ ಪರಿಣಾಮ ತೀವ್ರ ಸುಟ್ಟ ಗಾಯಗಳಾಗಿದ್ದ ಅವರನ್ನು ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸೆಪ್ಟೆಂಬರ್ 30ರಂದು ಎಂಆರ್‌ಪಿಎಲ್‌ನ ಮೂರನೇ ಹಂತದಲ್ಲಿರುವ ಕೋಕರ್ ಹೈಡ್ರೋ ಟ್ರೀಟಿಂಗ್ ಯುನಿಟ್ (CHTU) ಘಟಕದಲ್ಲಿ ಸ್ಫೋಟ ಸಂಭವಿಸಿತ್ತು. ಈ ದುರಂತದಲ್ಲಿ ಹಳೆಯಂಗಡಿಯ ನಿವಾಸಿ ಮನೀಶ್ ಸ್ಥಳದಲ್ಲೇ ಮೃತಪಟ್ಟಿದ್ದರು. ಇದೀಗ ರಾಜೇಶ್ ಅವರ ಸಾವಿನಿಂದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಎರಡಾಗಿದೆ.

ಮೃತ ರಾಜೇಶ್ ಅವರು ಬ್ಯಾಪ್ಟಿಸ್ಟ್ ಡಿ’ಸೋಜಾ ಅವರ ಐವರು ಮಕ್ಕಳಲ್ಲಿ ಒಬ್ಬರಾಗಿದ್ದು, ಅವಿವಾಹಿತರಾಗಿದ್ದರು ಎಂದು ತಿಳಿದುಬಂದಿದೆ. ಶನಿವಾರ ಸಂಜೆ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸ್ಥಳಾಂತರಿಸಿ, ಬಳಿಕ ಕುಟುಂಬದವರಿಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮೃತ ರಾಜೇಶ್ ಡಿ’ಸಿಲ್ವಾ ಅವರ ಕುಟುಂಬಕ್ಕೆ ಎಂಆರ್‌ಪಿಎಲ್ ವತಿಯಿಂದ ₹1.20 ಕೋಟಿ ಪರಿಹಾರ ನೀಡಲಾಗಿದ್ದು, ಆಸ್ಪತ್ರೆಯ ಚಿಕಿತ್ಸಾ ವೆಚ್ಚವನ್ನೂ ಸಂಸ್ಥೆಯೇ ಭರಿಸಿದೆ ಎಂದು ವರದಿಯಾಗಿದೆ.