ಮಂಗಳೂರು (ದಕ್ಷಿಣ ಕನ್ನಡ): ದೇಶದ ಅತೀ ದೊಡ್ಡ 17 ಮೃಗಾಲಯಗಳ ಪೈಕಿ ಒಂದಾಗಿರುವ ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನ ಪ್ರಾಣಿಗಳ ಸಂತಾನಾಭಿವೃದ್ಧಿಯಲ್ಲಿ ದೇಶದಲ್ಲೇ ನಂಬರ್ 1 ಎಂಬ ಗೌರವಕ್ಕೆ ಪಾತ್ರವಾಗಿದೆ. ಅದರಲ್ಲೂ ದೇಶದಲ್ಲಿ ಅಪರೂಪದ ಹುಲಿ, ಕಾಡು, ಶ್ವಾನ, ಕಾಳಿಂಗ, ರಿಯಾ ಜಾತಿಯ ಹಕ್ಕಿಯ ಸಂತಾನಾಭಿವೃದ್ಧಿಯಲ್ಲಿ ಪಿಲಿಕುಳ ಮೃಗಾಲಯ ಹೆಚ್ಚು ಪ್ರಸಿದ್ಧಿ ಪಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿರುವ ಪಿಲಿಕುಳ ಜೈವಿಕ ಉದ್ಯಾನ ಪ್ರಾಣಿಗಳ ಸಂತಾನಾಭಿವೃದ್ಧಿಯಲ್ಲಿ ದೇಶದಲ್ಲೇ ನಂಬರ್ 1 ಎಂಬ ಗೌರವಕ್ಕೆ ಪಾತ್ರವಾಗಿದೆ.
ರಾಜ್ಯ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದಡಿ ಪಿಲಿಕುಳ ಮೃಗಾಲಯ ಬರುತ್ತದೆ. ಈ ಉದ್ಯಾನ 150 ಎಕರೆ ವ್ಯಾಪ್ತಿಯನ್ನು ಹೊಂದಿದೆ. ನಮ್ಮ ದೇಶದಲ್ಲಿ 164 ಮಾನ್ಯತೆ ಪಡೆದ ಮೃಗಾಲಯವಿದ್ದು, ಅದರಲ್ಲಿ ಒಟ್ಟು ಅತಿ ದೊಡ್ಡ 17 ಮೃಗಾಲಯಗಳು ಇದೆ. ಅದರಲ್ಲಿ ಮಂಗಳೂರಿನ ಪಿಲಿಕುಳ ಕೂಡ ಒಂದಾಗಿದೆ.
ಅದರಲ್ಲಿಯೂ ಕಾಳಿಂಗ ಸರ್ಪದ ಸಂತಾನೋತ್ಪತ್ತಿ ನಮ್ಮಲ್ಲಿ ಮಾತ್ರ ಆಗುತ್ತಿದೆ. ಕಾಳಿಂಗ ಸರ್ಪವ ವೈಜ್ಞಾನಿಕವಾಗಿ ಸಂತಾನೋತ್ಪತ್ತಿ ಮಾಡುತ್ತಿದ್ದು, ಈಗಾಗಲೇ 180 ಮರಿಗಳಾಗಿದೆ. ಹೆಚ್ಚುವರಿ ಕಾಳಿಂಗ ಮರಿಗಳನ್ನು ಕಾಡಿಗೆ ಬಿಡಲಾಗಿದೆ. ಈ ಸಂತಾನಾಭಿವೃದ್ಧಿ ಹೆಚ್ಚಲು ಪಿಲಿಕುಳದಲ್ಲಿರುವ ವಾತಾವರಣ, ಆರೈಕೆ ಮುಖ್ಯವಾಗಿದೆ.
ಇಲ್ಲಿ ಅವುಗಳಿಗೆ ಕಾಡಿನಲ್ಲಿ ಇರುವ ವಾತಾವರಣ ನಿರ್ಮಾಣ ಮಾಡಲಾಗಿದೆ. ಅವಶ್ಯಕತೆಗೆ ತಕ್ಕಂತೆ ಸಮತೋಲನ ಆಹಾರ, ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತದೆ. ಹುಟ್ಟಿದ ಮರಿಗಳ ಪಾಲನೆಗೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಉದಾಹರಣೆಗೆ ಹುಲಿ ಮರಿ ಹುಟ್ಟಿದರೆ ಅವುಗಳ ಗೂಡಿಗೆ ಅದರ ಪರಿಪಾಲಕರು ಶುಚಿತ್ವ ಕಾಪಾಡಿಕೊಂಡು ಹೋಗಬೇಕು. ಒಂದು ತಿಂಗಳಲ್ಲಿ ವ್ಯಾಕ್ಸಿನ್, ಎರಡನೇ ತಿಂಗಳಲ್ಲಿ ಬೂಸ್ಟರ್ ಡೋಸ್ ನೀಡಲಾಗುತ್ತದೆ. ಅವಶ್ಯಕತೆ ಅನುಗುಣವಾಗಿ ಕ್ವಾರಂಟೈನ್ನಲ್ಲಿ ಇರಿಸಲಾಗುತ್ತದೆ. ಈ ರೀತಿ ಮಾಡಿದ ಪರಿಣಾಮ ದೇಶದಲ್ಲಿ ಅತೀ ಹೆಚ್ಚು ಸಂತಾನಾಭಿವೃದ್ಧಿ ಪಿಲಿಕುಳ ಮೃಗಾಲಯದಲ್ಲಿ ಆಗುತ್ತಿದೆ ಎಂದು ತಿಳಿಸಿದರು.
ಪಿಲಿಕುಳದಲ್ಲಿ ಹಲವು ವರ್ಷ ಹಿಂದೆ ದೇಶದಲ್ಲೇ ಪ್ರಥಮ ಬಾರಿ ವೈಜ್ಞಾನಿಕವಾಗಿ ಕಾಳಿಂಗಗಳ ಸಂತಾನಾಭಿವೃದ್ಧಿ ಪಡಿಸಿದ ಕೀರ್ತಿ ಪಿಲಿಕುಳ ಮೃಗಾಲಯಕ್ಕೆ ಸಲ್ಲುತ್ತದೆ. ಪಿಲಿಕುಳದಲ್ಲಿ ಒಟ್ಟು 15 ಕಾಳಿಂಗ ಸರ್ಪಗಳಿದ್ದು, ಬೇಡಿಕೆ ಹಿನ್ನೆಲೆಯಲ್ಲಿ ಬೇರೆ ಮೃಗಾಲಯಕ್ಕೆ ಕಳುಹಿಸಲಾಗುತ್ತಿದೆ. ಸಂತಾನಾಭಿವೃದ್ಧಿಯ ಸುಮಾರು 175ಕ್ಕೂ ಅಧಿಕ ಕಾಳಿಂಗಗಳನ್ನು ದಟ್ಟಾರಣ್ಯಕ್ಕೆ ಬಿಡಲಾಗಿದೆ. 50ಕ್ಕೂ ಅಧಿಕ ಕಾಳಿಂಗ ಬೇರೆ ಮೃಗಾಲಯಕ್ಕೆ ಕಳುಹಿಸಲಾಗಿದೆ.
ಈ ಬಗ್ಗೆ ಮಾತನಾಡಿದ ಪಿಲಿಕುಳ ಜೈವಿಕ ಉದ್ಯಾನದ ನಿರ್ದೇಶಕ ಜಯಪ್ರಕಾಶ್ ಭಂಡಾರಿ ಪಿಲಿಕುಳ ಜೈವಿಕ ಉದ್ಯಾನದಲ್ಲಿ 120 ಮಿಕ್ಕಿ ವಿವಿಧ ವರ್ಗಕ್ಕೆ ಸೇರಿದ ಪ್ರಾಣಿ ಪಕ್ಷಿಗಳಿವೆ. ಇದರಲ್ಲಿ 40 ಪ್ರಾಣಿಪಕ್ಷಿಗಳು ಅಳಿವಿನಂಚಿನಲ್ಲಿರುವ ಜೀವಿಗಳು. ನಮ್ಮ ಮೃಗಾಲಯದಲ್ಲಿ ಇತರ ಮೃಗಾಲಯಗಳಿಗೆ ಹೋಲಿಸಿದರೆ ಹುಲಿ, ಚಿರತೆ, ಕಾಳಿಂಗ ಸರ್ಪಗಳ ಸಂತಾನಾಭಿವೃದ್ಧಿ ಹೆಚ್ಚಿನ ಸಂಖ್ಯೆಯಲ್ಲಿ ಆಗುತ್ತಿದೆ.
ಉದ್ಯಾನದಲ್ಲಿ ಈವರೆಗೆ ಒಟ್ಟು 15 ಕ್ಕೂ ಅಧಿಕ ಹುಲಿ ಮರಿಗಳ ಜನನವಾಗಿದೆ, ಇಲ್ಲಿ ಪ್ರಸ್ತುತ 12 ಹುಲಿಗಳಿವೆ. ಉಳಿದವುಗಳನ್ನು ಚೆನ್ನೈ, ರಿಲಯನ್ಸ್, ಬನ್ನೇರುಘಟ್ಟ ಸೇರಿದಂತೆ ಉಳಿದ ಮೃಗಾಲಯದೊಂದಿಗೆ ವಿನಿಮಯ ಮಾಡಲಾಗಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣಂ ಮೃಗಾಲಯದಿಂದ ತರಿಸಲಾದ ಅಳಿವಿನಂಚಿನಲ್ಲಿರುವ ಕಾಡು ಶ್ವಾನಗಳ ವರ್ಗಕ್ಕೆ ಸೇರಿದ ‘ದೋಳ್ ‘ ಕೂಡ ಪಿಲಿಕುಳದಲ್ಲಿ ಸಂತಾನಾಭಿವೃದ್ಧಿಯಲ್ಲಿ ಯಶಸ್ಸು ಕಂಡಿದೆ. ಇಲ್ಲಿ ಕಾಡು ಶ್ವಾನಗಳ ಸಂಖ್ಯೆ 30 ದಾಟಿದೆ.
ಹುಲಿ, ಸಿಂಹ, ಚಿರತೆ, ಕಾಡು ನಾಯಿಗಳು, ಕತ್ತೆಕಿರುಬ, ನರಿಗಳು, ಹಿಪ್ಪೋಗಳು, ಮೊಸಳೆ, ಆಮೆ, ಪಕ್ಷಿಗಳು, ಜಿಂಕೆಗಳು, ಕೃಷ್ಣ ಮೃಗಗಳು , ಮುಂಗುಸಿ, ಕಾಡು ಬೆಕ್ಕುಗಳು, ಬೂದು ತೋಳಗಳು, ಅಳಿಲು ಸೇರಿದಂತೆ ಸುಮಾರು 1,440 ಪ್ರಾಣಿ ಪಕ್ಷಿಗಳು ಈ ಮೃಗಾಲಯದಲ್ಲಿ ಇದೆ. ಅಪರೂಪದ ಮತ್ತು ಅತಿ ಹೆಚ್ಚು ಪ್ರಾಣಿಗಳ ಸಂತಾನಾಭಿವೃದ್ಧಿಗೆ ಈ ಪ್ರದೇಶದ ಪೂರಕ ವಾತಾವರಣ ಕಾರಣವಾಗಿದೆ. ಅಳಿವಿನಂಚಿನಲ್ಲಿರುವ ಪ್ರಾಣಿಗಳ ಸಂರಕ್ಷಣೆ ಮತ್ತು ಸಂತಾನಾಭಿವೃದ್ಧಿಗೆ ಪಿಲಿಕುಳ ಹೆಸರುವಾಸಿಯಾಗಿದ್ದು, ಬೇರೆ ಮೃಗಾಲಯದಿಂದ ತರಿಸಲಾದ ಪ್ರಾಣಿ, ಪಕ್ಷಿಗಳು ತನ್ನ ಸಂತಾನಾಭಿವೃದ್ಧಿ ವೃದ್ಧಿಸುತ್ತಿರುವುದು ಈ ಮೃಗಾಲಯದ ವಿಶೇಷವಾಗಿದೆ. ಹಾವಿನ ಪ್ರಭೇದಗಳ ದೊಡ್ಡ ಸಂಗ್ರಹ ಪಿಲಿಕುಳದಲ್ಲಿದೆ.
ಭಾರತದಾದ್ಯಂತ ಪಿಲಿಕುಳ ಮತ್ತು ನಾನಾ ಮೃಗಾಲಯ ನಡುವೆ ವಿನಿಮಯ ಒಪ್ಪಂದಗಳಿವೆ. ಇಲ್ಲಿಂದ ಹುಲಿ, ಕಾಳಿಂಗ, ಹೆಬ್ಬಾವು ಸೇರಿದಂತೆ ನಾನಾ ಪ್ರಾಣಿ, ಪಕ್ಷಿಗಳನ್ನು ಕಳುಹಿಸಿಕೊಡಲಾಗುತ್ತದೆ. ಚೆನ್ನೈಯ ವಂಡಲೂರು ಮೃಗಾಲಯದಿಂದ ಬಿಳಿ ಹುಲಿ ತರಿಸಲಾಗಿದ್ದು, ಅವರಿಗೆ ಒಂದು ಬೆಂಗಾಲಿ ಹುಲಿ ನೀಡಲಾಗಿದೆ. ರಿಲಯನ್ಸ್ ಮೃಗಾಲಯಕ್ಕೆ 2 ಹುಲಿ, 2 ಚಿರತೆ ನೀಡಲಾಗಿದೆ. ಬನ್ನೇರುಘಟ್ಟ ಮೃಗಾಲಯಕ್ಕೆ ಪಿಲಿಕುಳದ ಒಂದು ಗಂಡು ಹುಲಿ ನೀಡಿ ಬದಲಿಗೆ ಹೆಣ್ಣು ಹುಲಿಯನ್ನು ಕರೆ ತರಲಾಗಿತ್ತು ಎನ್ನುತ್ತಾರೆ.