ಮಂಗಳೂರು: ನಗರದ ದಕ್ಷಿಣದಲ್ಲಿ ಒಂದೇ ದಿನ 72 ಕಡೆಗಳಲ್ಲಿ ದಾಖಲೆಯ ಗುದ್ದಲಿಪೂಜೆ: ಶಾಸಕ ಕಾಮತ್

ಮಂಗಳೂರು: ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ 72 ಕಡೆಗಳಲ್ಲಿ ಗುರುವಾರ ವಿವಿಧ ಕಾಮಗಾರಿಗಳಿಗೆ ಗುದ್ದಲಿಪೂಜೆಯನ್ನು ಶಾಸಕ ವೇದವ್ಯಾಸ್ ಕಾಮತ್ ಅವರ ಸೂಚನೆಯಂತೆ ಸ್ಥಳೀಯ ಮುಖಂಡರು ನೆರವೇರಿಸಿದರು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಾಸಕ ಕಾಮತ್, ಲೋಕೋಪಯೋಗಿ ಇಲಾಖೆಯಿಂದ 6.29 ಕೋಟಿ ವೆಚ್ಚದಲ್ಲಿ ಒಟ್ಟು 28 ಕಾಮಗಾರಿಗಳು, ಸಾಮಾನ್ಯ ನಿಧಿ ಅನುದಾನದಡಿ 2.13 ಕೋಟಿ ವೆಚ್ಚದಲ್ಲಿ 24 ಕಾಮಗಾರಿಗಳು, ಮಳೆಹಾನಿಗೆ ಸಂಬಂಧಪಟ್ಟ ಕಾಮಗಾರಿಗಳು 1.19 ಕೋಟಿ ವೆಚ್ಚದಲ್ಲಿ ಹಾಗೂ ಕೈಗಾರಿಕಾ ವಲಯದ ಅಭಿವೃದ್ಧಿ ಕಾಮಗಾರಿಗಳು 5.65 ಕೋಟಿ ವೆಚ್ಚದ ಕಾಮಗಾರಿಗಳು ಸೇರಿದಂತೆ ಒಟ್ಟು 15.26 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಗುದ್ದಲಿಪೂಜೆ ಮಾಡುವ ಮೂಲಕ ದಾಖಲೆ ಬರೆದಿದ್ದೇವೆ. ವಿಶೇಷವೆಂದರೆ ಗುದ್ದಲಿಪೂಜೆ ಶಾಸಕರಿಂದಲೇ ನೆರವೇರಬೇಕು ಎನ್ನುವ ಹಳೇಯ ಸಂಪ್ರದಾಯವನ್ನು ಮುರಿದು ಈ ಎಲ್ಲಾ ಕಾಮಗಾರಿಗಳನ್ನು ಸ್ಥಳೀಯರ ಮೂಲಕವೇ ನೆರವೇರಿಸಿದ್ದೇವೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.

ಸರ್ವರನ್ನೂ ಜೊತೆ ಸೇರಿಸಿಕೊಂಡು ಕ್ಷೇತ್ರಾಭಿವೃದ್ಧಿಯ ದೃಷ್ಟಿಯಿಂದ ಅಧಿಕಾರಿಗಳು ಹಾಗೂ ಸಾರ್ವಜನಿಕರ ಹೊಂದಾಣಿಕೆಯಿಂದ ನಾವು ಧ್ಯೇಯ ಚಿತ್ತರಾಗಿ ಸಾಗುತ್ತಿದ್ದೇವೆ. ಮುಂದಿನ ಅವಧಿಯ ಒಳಗಾಗಿ ಮಂಗಳೂರನ್ನು ಅಭಿವೃದ್ಧಿಯ ಉತ್ತುಂಗಕ್ಕೇರಿಸುವ ಮೂಲಕ ತನ್ನ ಜವಬ್ದಾರಿಯನ್ನು ನಿಭಾಯಿಸುತ್ತೇನೆ. ಸರಕಾರದಿಂದ ಅನುದಾನ ತರುವ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳು ನಡೆಯುತ್ತಲೇ ಇರುತ್ತದೆ ಎಂದರು.