ಯೆಯ್ಯಾಡಿ: 5.65 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿಪೂಜೆ

ಮಂಗಳೂರು: ಯೆಯ್ಯಾಡಿ ಕೈಗಾರಿಕಾ ವಲಯದಲ್ಲಿ 5.65 ಕೋ. ರೂ. ವೆಚ್ಚದಲ್ಲಿ ನಡೆಯುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ.ವೇದವ್ಯಾಸ್ ಕಾಮತ್ ಅವರ ಸೂಚನೆಯ ಮೇರೆಗೆ ಅಧಿಕಾರಿಗಳು ಮತ್ತು ಸ್ಥಳೀಯ ಮುಖಂಡರು ಮಂಗಳವಾರ ಗುದ್ದಲಿಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಸ್ಥಳೀಯರು, ಯೆಯ್ಯಾಡಿ ಕೈಗಾರಿಕಾ ಪ್ರದೇಶದಲ್ಲಿ ಆಗಬೇಕಿರುವ ಅಭಿವೃದ್ಧಿಯ ಕುರಿತು ಶಾಸಕ ವೇದವ್ಯಾಸ್ ಕಾಮತ್ ಅವರ ಬಳಿ ಬೇಡಿಕೆಯಿಟ್ಟಿದ್ದೆವು. ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೊಳಿಸಿದರೆ ಕೈಗಾರಿಕಾ ವಲಯದ ಗುಣಮಟ್ಟದ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿ ಇಲ್ಲಿಗೆ ಪ್ರಥಮ ಪ್ರಾಶಸ್ತ್ಯ ನೀಡಿ ಅನುದಾನ ಬಿಡುಗಡೆಗೊಳಿಸುವಲ್ಲಿ ನಿರಂತರವಾಗಿ ಶಾಸಕ ವೇದವ್ಯಾಸ್ ಕಾಮತ್ ಅವರು ಶ್ರಮಿಸಿದ್ದಾರೆ ಎಂದರು.
ಶಾಸಕ ವೇದವ್ಯಾಸ್ ಕಾಮತ್ ಅವರು ಮಾತನಾಡಿ, ಮಂಗಳೂರು ನಗರದಲ್ಲಿ ಕೈಗಾರಿಕಾ ವಲಯವು ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಯೆಯ್ಯಾಡಿ ಕೈಗಾರಿಕಾ ವಸಾಹತಿಗೆ ಮೂಲಭೂತ‌ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ 5.65 ಕೋಟಿ ಅನುದಾನ ನೀಡಲಾಗಿದೆ. 2019 – 20ನೇ ಸಾಲಿನಲ್ಲಿ ಯೆಯ್ಯಾಡಿ ವಸಾಹತು ನೆಲೆಯಲ್ಲಿ ಒಳ ಚರಂಡಿ ವ್ಯವಸ್ಥೆ, ರಸ್ತೆ ಅಭಿವೃದ್ಧಿ, ಆರ್.ಸಿ.ಸಿ, ಚರಂಡಿ ನೀರು ಸಂಗ್ರಹಾಗಾರ, ಬೀದಿ ದೀಪಗಳ ಅಳವಡಿಕೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಈ ಮೊತ್ತ ವ್ಯಯಿಸಲಾಗುವುದು ಎಂದರು.
ಮಂಗಳೂರು ನಗರ ಪ್ರದೇಶವು ಶರವೇಗದಲ್ಲಿ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಪ್ರಮುಖವಾಗಿ ಆಗಬೇಕಿರುವ ಕಾಮಗಾರಿಯ ಪಟ್ಟಿ ಮಾಡಿ ಅದಕ್ಕಾಗಿ ಅನುದಾನ ಒದಗಿಸುವ ಕಾರ್ಯಗಳು ಮುಂದಿನ ದಿನಗಳಲ್ಲಿ ಆಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ರೂಪಾ. ಡಿ. ಬಂಗೇರ, ಸಂಜಯ ಪ್ರಭು, ಶ್ರೀನಿವಾಸ್ ಶೇಟ್, ವಸಂತ್ ಜೆ ಪೂಜಾರಿ, ಸೂರಜ್ ಕಾಮತ್, ಪ್ರವೀಣ್ ಗುಂಡಳಿಕೆ, ಚರಣ್ ಗುಂಡಳಿಕೆ, ದಿನೇಶ್ ಬಂಗೇರ, ಗುತ್ತಿಗೆದಾರರಾದ ಉದಯ್ ಕುಮಾರ್ ಶೆಟ್ಟಿ ಮುನಿಯಾಲು,
ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಅದ್ಯಕ್ಷ ವಿಶಾಲ್ ಸಾಲ್ಯಾನ್, ಮಾಜಿ ಅಧ್ಯಕ್ಷರುಗಳಾದ ಅಣ್ಣಪ್ಪ ಪೈ, ಜಯರಾಜ್ ಪೈ, ಸುಮಿತ್ ರಾವ್, ಗೋಪಿನಾಥ್ ಮಲ್ಯ, ಸಂಘದ ಮುಖಂಡರಾದ  ರಘುವೀರ್ ನಾಯಕ್, ಕೃಷ್ಣದಾಸ್ ಕಾಮತ್,  ಕೆ.ಎಸ್.ಐ.ಎ ಬೈಕಂಪಾಡಿ ಇದರ ಅದ್ಯಕ್ಷರಾದ ಅಜಿತ್ ಕಾಮತ್, ಕೆಸಿಸಿಐ ಅದ್ಯಕ್ಷರಾದ ಐಸಾಕ್ ವಾಸ್, ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಗೋಕುಲ್ ದಾಸ್ ನಾಯಕ್, ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶಫೀಕ್ ಅಹಮ್ಮದ್ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.