ಮಂಗಳೂರು ವಿಮಾನ ನಿಲ್ದಾಣ ಬಾಂಬ್ ಪ್ರಕರಣ: ಆದಿತ್ಯ ರಾವ್ ಬಂಧನ

ಮಂಗಳೂರು: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್‌ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಪಾಲ ಮೂಲದ ಆದಿತ್ಯ ರಾವ್ ನನ್ನು ಬುಧವಾರ ಬಂಧಿಸಲಾಗಿದೆ.
ಮುಂಜಾನೆ ಆರೋಪಿ ಆದಿತ್ಯ ರಾವ್​ನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ. ತಾನೇ ಏರ್​ಪೋರ್ಟ್​ನಲ್ಲಿ ಬಾಂಬ್ ಇಟ್ಟಿದ್ದು ಎಂದು ಖುದ್ದು ಆದಿತ್ಯ ರಾವ್  ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದ. ಈ ಕುರಿತು ವಿಚಾರಣೆಗಾಗಿ ಮಂಗಳೂರು ಪೊಲೀಸರು ಬೆಂಗಳೂರಿಗೆ ತೆರಳಿ ವಿಚಾರಣೆ ನಡೆಸುವುದಾಗಿ ಮಂಗಳೂರು ಪೊಲೀಸ್ ಆಯುಕ್ತ ಡಾ. ಹರ್ಷ ಟ್ವೀಟ್ ಮಾಡಿದ್ದಾರೆ.
ಎಂಜಿನಿಯರ್‌ ಮತ್ತು ಎಂಬಿಎ ಪದವೀಧರನಾಗಿರುವ ಆದಿತ್ಯ ರಾವ್‌ 2018ರಲ್ಲಿ ಬೆಂಗಳೂರು ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣ ಸ್ಫೋಟಿಸುವುದಾಗಿ ಹುಸಿ ಬೆದರಿಕೆ ಕರೆ ಮಾಡಿ, ಬಂಧಿತನಾಗಿದ್ದ. ಈತ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ಹುದ್ದೆಗೆ ಅರ್ಜಿ ಸಲ್ಲಿಸಿದ್ದು, ಕೆಲವೊಂದು ತಾಂತ್ರಿಕ ಕಾರಣದಿಂದ ಆತನ ಅರ್ಜಿ ವಜಾಗೊಂಡಿತ್ತು. ಇದೇ ಕೋಪದಲ್ಲಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್‌ ಬೆದರಿಕೆ ಹಾಕಿದ್ದ.
ಇದರ ಮುಂದಿನ ಭಾಗ ಮಂಗಳೂರಿನಲ್ಲಿ ನಡೆದಿರಬಹುದು ಎನ್ನುವುದು ಪೊಲೀಸರ ಶಂಕೆ. ಮಣಿಪಾಲದ ಮನೆಗೆ ಪೊಲೀಸರು ಭೇಟಿ ನೀಡಿದಾಗ ಆತ ಸಿಕ್ಕಿಲ್ಲ.