ಡಿ.ಕೆ. ಶಿವಕುಮಾರ್ ಬಂಧನ‌ ಹಿನ್ನೆಲೆ ಕರಾವಳಿಯಾದ್ಯಂತ‌ ಪ್ರತಿಭಟನೆ: ಬಸ್ ಗಳಿಗೆ ಕಲ್ಲು ತೂರಾಟ: ಹಲವರ‌ ಬಂಧನ

ಮಂಗಳೂರು/ಉಡುಪಿ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನ ವಿರೋಧಿಸಿ ಪ್ರತಿಭಟನೆಗೆ ಕರೆ ನೀಡಿದ ಬೆನ್ನಲ್ಲೇ ಮಂಗಳೂರು ಸೇರಿದಂತೆ ಕರಾವಳಿಯಾದ್ಯಂತ ಬುಧವಾರ ಪ್ರತಿಭಟನೆ ನಡೆಯುತ್ತಿದೆ.
ಮಂಗಳೂರುನ‌ ಜಿಲ್ಲಾಧಿಕಾರಿ ಕಚೇರಿ ಮುಂಬಾಗ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಲಾಗಿದೆ.
ಮಾಜಿ ಸಚಿವ ಅಭಯಚಂದ್ರ ಜೈನ್, ವಿದಾನ ಪರಿಷತ್ ಸದಸ್ಯ ಐವನ್ ಡಿ ಸೋಜಾ ಹರೀಶ್ ಕುಮಾರ್ ಭಾಗಿಯಾಗಿದ್ದು, ಕೂಡಲೇ ಅವರನ್ನು ಬಂಧಿಸಲಾಗಿದೆ.
ಉಡುಪಿಯಲ್ಲೂ ನೂರಾರು ಮಂದಿ ಕಾರ್ಯಕರ್ತರು, ಕಾಂಗ್ರೆಸ್ ಮುಖಂಡರು ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದರು.
ಅಲ್ಲಲ್ಲಿ ಬಸ್ಸುಗಳಿಗೆ ಕಲ್ಲು ತೂರಾಟ:
ಬಂದ್ ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ವಿವಿಧೆಡೆ ಬಸ್ ಗೆ ಕಲ್ಲು ತೂರಿದ ಘಟನೆ ನಡೆದಿದೆ‌. ಮಂಗಳೂರಿನ ಫಳ್ನೀರ್ ಮತ್ತು ನಂದಿಗುಡ್ಡೆಯಲ್ಲಿ ಸಂಚರಿಸುತ್ತಿದ್ದ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆದಿದೆ.
ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಕಂಕನಾಡಿ ಮಾರ್ಗದಿಂದ ಸ್ಟೇಟ್ ಬ್ಯಾಂಕ್ ಗೆ ತೆರಳುತ್ತಿದ್ದ ನಂ.6 ಖಾಸಗಿ ಬಸ್ ಮೇಲೂ ಕಲ್ಲು ತೂರಾಟ ನಡೆದಿದೆ. ಫಳ್ನೀರ್ ನಲ್ಲಿ ನಡೆದ ಕಲ್ಲು ತೂರಾಟದಲ್ಲಿ ಬಸ್ ನ ಗಾಜು ಸಂಪೂರ್ಣ ಪುಡಿಗಟ್ಟಿದೆ.
ಕಿನ್ನಿಗೋಳಿಯಲ್ಲಿ‌ ರಾತ್ರಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು 5 ಬಸ್ ನ ಗ್ಲಾಸ್ ಗೆ ಕಲ್ಲೆಸೆದು ಪುಡಿಗೈದಿರುವ ಘಟನೆ ನಡೆದಿದೆ. ದುಷ್ಕರ್ಮಿಗಳು ಬಸ್ ನ ಗಾಜಿಗೆ ಕಲ್ಲೆಸೆಯುತ್ತಿರುವ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ 5 ಬಸ್ ಗಳು ಕಾಂಗ್ರೆಸ್ ಮುಖಂಡ ದುರ್ಗಾಪ್ರಸಾದ್ ಎಂಬುವವರಿಗೆ ಸೇರಿದ್ದು, ಬಟ್ಟಕೋಡಿ, ಕಿನ್ನಿಗೋಳಿ, ಕಟೀಲ್ ನಲ್ಲಿ ನಿಂತಿದ್ದ ಬಸ್ಸುಗಳಿಗೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಕಲ್ಲೆಸೆದು ಪರಾರಿಯಾಗಿದ್ದಾರೆ. ಈ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ದುಷ್ಕರ್ಮಿಗಳು ಕಾರಿನಿಂದ ಇಳಿದು ಕಲ್ಲುಗಳಿಂದ ಬಸ್ ನ ಗ್ಲಾಸ್ ನ್ನು ಪುಡಿಗೈಯುತ್ತಿರುವ ದೃಶ್ಯ ದಾಖಲಾಗಿದೆ. ಮೂಲ್ಕಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.