ಉಡುಪಿ: ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66 ಮತ್ತು ಮಲ್ಪೆ- ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈಗ ಸಂಪೂರ್ಣ ಹೊಂಡಗಳದ್ದೇ ಕಾರುಬಾರು. ಜಿಲ್ಲೆಯ ಸಾವಿರಾರು ಪ್ರಯಾಣಿಕ ವಾಹನಗಳಿಗೆ ನಿತ್ಯ ಆಸರೆಯಾಗಿರುವ ಹೆದ್ದಾರಿಗಳು ಮರಣ ಮೃದಂಗ ಬಾರಿಸುತ್ತಿವೆ. ಹೆದ್ದಾರಿಗಳಲ್ಲಿ ನಿರ್ಮಾಣವಾಗಿರುವ ಆಳತ್ತೆರದ ಗುಂಡಿಯಲ್ಲಿ ಬಿದ್ದು, ಪ್ರಾಣ ಕಳೆದುಕೊಂಡ, ಕೈ ಕಾಲು ಮುರಿದುಕೊಂಡ ಘಟನೆಗಳು ಹಲವಾರು ನಡೆದಿವೆ.
ಸುರತ್ಕಲ್ -ಕುಂದಾಪುರ ರಾಷ್ಟ್ರೀಯ ಹೆದ್ದಾರಿ ಸ್ಥಿತಿ ಚಿಂತಾಜನಕವಾಗಿದೆ. ಇಲ್ಲಿ ರಸ್ತೆಯಲ್ಲಿ ಗುಂಡಿಯೋ, ಗುಂಡಿಯೊಳಗೆ ರಸ್ತೆಯೋ ಎಂದು ಪ್ರಯಾಣಿಕರು ಗಲಿಬಿಲಿಗೊಂಡು ಪ್ರಾಣ ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಸುವಂತಾಗಿದೆ. ರಾತಿ ಹೊತ್ತು ಪ್ರಯಾಣಿಸುವ ಪ್ರಯಾಣಿಕರು ಸ್ವಲ್ಪ ಎಚ್ಚರ ತಪ್ಪಿದರೂ ಯಮಲೋಕ ಪ್ರಯಾಣ ಗ್ಯಾರಂಟಿ ಅನ್ನುವ ಸ್ಥಿತಿ ನಿರ್ಮಾಣವಾಗಿದೆ.
ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿದ್ದ ಆಳವಾದ ಹೊಂಡವನ್ನು ತಪ್ಪಿಸಲು ಮುಂಬೈ – ಮಂಗಳೂರು ಖಾಸಗಿ ಬಸ್ಸೊಂದು ಕುಂದಾಪುರ ಸಮೀಪ ಡಿವೈಡರ್ ಮೇಲೆ ಚಲಿಸಿದ್ದರೆ, ಮಲ್ಪೆ ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯ ಹಿರಿಯಡ್ಕ ಸಮೀಪ ದ್ವಿಚಕ್ರ ವಾಹನ ಸವಾರರೋರ್ವರು ಹೊಂಡ ತಪ್ಪಿಸಲು ಹೋಗಿ ವಾಹನದಿಂದ ಬಿದ್ದು ಮೃತಪಟ್ಟ ಘಟನೆ ಕೂಡ ನಡೆದಿದೆ. ಮಂಗಳೂರು- ಉಡುಪಿ- ಕುಂದಾಪುರ ರಸ್ತೆಯಲ್ಲಿ ನೂರು-ಇನ್ನೂರು ಮೀಟರ್ ಗೊಂದರಂತೆ ದೊಡ್ಡ ಗಾತ್ರದ ಹೊಂಡಗಳು ಇವೆ. ಈ ಹೊಂಡಗಳು ಅಫಘಾತಗಳಿಗೆ ಕಾರಣವಾಗುತ್ತಿದೆ.
ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆ, ಅಸಮರ್ಪಕ ಒಳ ಚರಂಡಿ ವ್ಯವಸ್ಥೆ, ಕಳಪೆ ರಸ್ತೆ ಕಾಮಗಾರಿಗಳಿಂದಾಗಿ ಇಂತಹ ಸ್ಥಿತಿ ನಿರ್ಮಾಣವಾಗಿದ್ದು, ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಶಿಕ್ಷೆ ಅನುಭವಿಸುವಂತಾಗಿದೆ. ನಿತ್ಯ ಈ ರಸ್ತೆಗಳಲ್ಲಿ ಸಂಚರಿಸುವ ಪ್ರಯಾಣಿಕರ ನರಕಯಾತನೆ ಕೇಳುವವರಿಲ್ಲದೆ ಸಾರ್ವಜನಿಕರು ಹೈರಾಣಾಗಿದ್ದಾರೆ.