ಸುರತ್ಕಲ್‌ ಟೋಲ್‌ಗೇಟ್ ವಿರುದ್ಧ ಪ್ರತಿಭಟನೆ

ಮಂಗಳೂರು: ಮಂಗಳೂರಿನ ಸುರತ್ಕಲ್ ನ ಅಕ್ರಮ ಟೋಲ್‌ಗೇಟ್ ವಿರುದ್ಧ ಏಕಕಾಲದಲ್ಲಿ ಕಾಂಗ್ರೆಸ್ ಬೆಂಬಲಿತ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ಹಾಗೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಮುಂಜಾನೆಯೇ ಟೋಲ್‌ಗೇಟ್ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು ಅಕ್ರಮ ಟೋಲ್ ವಸೂಲಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿಯು ಪ್ರತಿಭಟನೆ ನಡೆಸುವ ಸನಿಹದಲ್ಲೇ ಬಿಜೆಪಿಗರೂ ಕೂಡ ಪ್ರತಿಭಟನೆ ನಡೆಸಿ ಗಮನ ಸೆಳೆದರು.
ಈ ವೇಳೆ ಮಾತನಾಡಿದ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಪೊಲೀಸ್ ರಕ್ಷಣೆಯಲ್ಲಿ ಸುಂಕ ಸಂಗ್ರಹದ ವಿರುದ್ಧದ ಹೋರಾಟಕ್ಕೆ ನಮಗೆ ತಾತ್ಕಾಲಿಕ ಜಯ ಸಿಕ್ಕಿದೆ. ಸಚಿವ ಯು.ಟಿ. ಖಾದರ್  ಮಧ್ಯಪ್ರವೇಶದಿಂದಾಗಿ ಬಲವಂತದ ಟೋಲ್ ಸಂಗ್ರಹಕ್ಕೆ ಅವಕಾಶವನ್ನು ಜಿಲ್ಲಾಡಳಿತ ನಿರಾಕರಿಸಿರುವುದು ಶ್ಲಾಘನೀಯ.
ಸಚಿವ ಖಾದರ್‌ರಂತೆ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಭರತ್ ಶೆಟ್ಟಿ ಕೂಡ ಕೇಂದ್ರಮಟ್ಟದಲ್ಲಿ ತನ್ನ ಜವಾಬ್ದಾರಿ ನಿರ್ವಹಿಸಿದರೆ ಟೋಲ್ಗೇಟ್ ಲೂಟಿಯನ್ನು ತಡೆಯಬಹುದು ಎಂದರು.
ಇದೇ ವೇಳೆ ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ಸೇರಿ ಕಾಂಗ್ರೆಸ್, ಬಿಜೆಪಿಯ ಸ್ಥಳೀಯ ನಾಯಕರು ಉಪಸ್ಥಿತರಿದ್ದರು.