ಮಂಗಳೂರು: ಇಬ್ಬರು ಬೇಟೆಗಾರರನ್ನು ಬಂಧಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯದಲ್ಲಿ ನಡೆದಿದೆ.
ಸುಬ್ರಹ್ಮಣ್ಯದ ಅರಣ್ಯ ವಿಭಾಗಕ್ಕೆ ಸೇರಿದ ದೇವರಗದ್ದೆ ಅರಣ್ಯಕ್ಕೆ ಅಕ್ರಮವಾಗಿ ಪ್ರವೇಶಿಸಿ, ಕಾಡು ಪ್ರಾಣಿ ಬೇಟೆಯಲ್ಲಿ ನಿರತರಾಗಿದ್ದ ನಾಲ್ಕೂರು ಗ್ರಾಮದ ಚಾರ್ಮತ ನಿವಾಸಿ ನಿವೃತ್ತ ಸೈನಿಕ ಹೊನ್ನಪ್ಪ ಚಾರ್ಮತ ಮತ್ತು ಸುಬ್ರಹ್ಮಣ್ಯ ಗ್ರಾಮದ ದೇವರಗದ್ದೆ ರಮೇಶ ಕಲ್ಲುಗುಡ್ಡೆ ಎಂಬುವವರನ್ನು ಸುಬ್ರಹ್ಮಣ್ಯ ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಖಚಿತ ಮಾಹಿತಿ ಮೇಲೆ ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾಡಿನಿಂದ 3 ಕೆಂದಳಿಲು ಪ್ರಾಣಿ ಹೊಡೆದು ತರುತ್ತಿದ್ದಾಗ, ದೇವರಗದ್ದೆ ಬಳಿ ಅವರಿಬ್ಬರು ಬಂಧಿಸಿದ್ದಾರೆ.
ಈ ವೇಳೆ ತಂಡದಲ್ಲಿ ಇನ್ನಿಬ್ಬರು ಇದ್ದು, ಪರಾರಿಯಾಗಿದ್ದಾರೆ. ಬಂಧಿತರು ನೀಡಿದ ಮಾಹಿತಿಯಂತೆ ಪರಾರಿ ಯಾದವರು ಸುಬ್ರಹ್ಮಣ್ಯ ಡೆಮಲೆ ಹಾಗೂ ಸುಬ್ರಹ್ಮಣ್ಯ ನೂಚಿಲ ಎನ್ನಲಾಗಿದೆ.
ಆರೋಪಿಗಳಿಂದ ಒಂದು ನಾಡ ಕೋವಿ ಹಾಗೂ ಬೇಟೆಗೆ ಸಂಬಂಧಿಸಿದ ಸ್ವತ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ವಿಚಾರಣೆ ಬಳಿಕ ನ್ಯಾಯಾಧೀಶರ ಎದುರು ಹಾಜರುಪಡಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಕೆಲ ಸಮಯದಿಂದ ಅರಣ್ಯದೊಳಗೆ ಕೆಲ ವ್ಯಕ್ತಿಗಳು ಬೇಟೆಯಾಡುತ್ತಿರುವ ಕುರಿತು ಸಂಶಯ ವ್ಯಕ್ತವಾಗಿತ್ತು. ಅರಣ್ಯದೊಳಗೆ ಚಲನವಲನ ನಡೆಸುತ್ತಿದ್ದುದನ್ನು ಆಧರಿಸಿ ಈ ದಾಳಿ ನಡೆಸಲಾಗಿತ್ತು. ಪರಾರಿಯಾಗಿರುವ ಇಬ್ಬರ ಪತ್ತೆಗೆ ಬಲೆ ಬೀಸಿರುವುದಾಗಿ ಸುಬ್ರಹ್ಮಣ್ಯ ಅರಣ್ಯ ವಿಭಾಗದ ವಲಯ ಅರಣ್ಯ ಅಧಿಕಾರಿ ಮಾಹಿತಿ ನೀಡಿದ್ದಾರೆ. ಸುಬ್ರಹ್ಮಣ್ಯ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.