ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ 2018-19ನೇ ಸಾಲಿನಲ್ಲಿ ಸಾರ್ವಕಾಲಿಕ ಗರಿಷ್ಠ 30.29 ಕೋ .ರೂ. ಲಾಭ ಗಳಿಸಿದ್ದು ಸದಸ್ಯ ಸಂಘಗಳಿಗೆ ಶೇ. 9 ಡಿವಿಡೆಂಡ್ ಅನ್ನು ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರು ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ಘೋಷಿಸಿದ್ದಾರೆ.
ಬ್ಯಾಂಕಿನ ಸಭಾಭವನದಲ್ಲಿ ಶನಿವಾರ ನಡೆದ 105ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ದಿನೇ ದಿನೇ ಸ್ಪರ್ಧೆಯನ್ನು ಎದುರಿಸಿದರೂ ಬ್ಯಾಂಕ್ ದೇಶದ ಅಗ್ರಮಾನ್ಯ ಸಹಕಾರಿ ಬ್ಯಾಂಕ್ ಎನಿಸಿಕೊಂಡಿದೆ ಎಂದರು.
ಅತೀ ಹೆಚ್ಚು ಠೇವಣಿ ಸಂಗ್ರಹ:
ಎಸ್ಸಿಡಿಸಿಸಿ ಬ್ಯಾಂಕ್ ವರದಿ ವರ್ಷದಲ್ಲಿ ಒಟ್ಟು 7,588.89 ಕೋ. ರೂ. ವ್ಯವಹಾರ ಸಾಧಿಸಿಗುರಿ ಮೀರಿದ ಸಾಧನೆಗೈದಿದೆ. 105ಶಾಖೆಗಳ ಮೂಲಕ 3,886.57 ಕೋ.ರೂ. ಠೇವಣಿ ಸಂಗ್ರಹಿಸಿ, ಅತೀ ಹೆಚ್ಚು ಠೇವಣಿ ಸಂಗ್ರಹಿಸಿದ ರಾಜ್ಯದ ಪ್ರಥಮ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಎನ್ನುವ ಕೀರ್ತಿಗೆ ಪಾತ್ರವಾಗಿದೆ. ಆರ್ಥಿಕ ವರ್ಷದಲ್ಲಿ 3,014.18 ಕೋ.ರೂ.ಮುಂಗಡ ನೀಡಿದೆ. 977 ಸಹಕಾರಿ ಸಂಘಗಳು ಬ್ಯಾಂಕಿಗೆ ಸದಸ್ಯರಾಗಿದ್ದು ಪಾಲು ಬಂಡವಾಳ 178.55 ಕೋ.ರೂ., ಬ್ಯಾಂಕಿನ ದುಡಿಯುವ ಬಂಡವಾಳ 5421.44 ಕೋ.ರೂ. ಹಾಗೂ ಬ್ಯಾಂಕ್ 111.19 ಕೋ.ರೂ. ವಿವಿಧ ನಿಧಿಗಳನ್ನು ಹೊಂದಿದೆ ಎಂದರು.
ಅವಿಭಜಿತ ದ.ಕ. ಜಿಲ್ಲೆಯಲ್ಲಿ ಸ್ವಸಹಾಯ ಗುಂಪುಗಳ ಸಂಘಟನೆಯಲ್ಲೂ ಬ್ಯಾಂಕ್ ಮುಂಚೂಣಿಯಲ್ಲಿದೆ. 32,532 ಸ್ವಸಹಾಯ ಗುಂಪುಗಳಿದ್ದು, ಅವುಗಳ ಒಟ್ಟು ಉಳಿತಾಯ 104.54 ಕೋ.ರೂ. ಒಟ್ಟು 32,250 ಸ್ವಸಹಾಯ ಗುಂಪುಗಳಿಗೆ ಸಾಲ ಸಂಯೋಜಿಸಲಾಗಿದ್ದು, ಇದರಲ್ಲಿ 165.57 ಕೋ.ರೂ. ಸಾಲ ಹೊರಬಾಕಿ ಇರುತ್ತದೆ.
ಬ್ಯಾಂಕ್ ವರದಿ ವರ್ಷದಲ್ಲಿ ನೀಡಿದ ಎಲ್ಲ ಕೃಷಿ ಸಾಲಗಳು ಶೇ. 100 ವಸೂಲಾಗಿವೆ. ಇಂತಹಸಾಧನೆಯನ್ನು ಬ್ಯಾಂಕ್ ಕಳೆದ 24 ವರ್ಷಗಳಿಂದ ನಿರಂತರವಾಗಿ ಮಾಡಿರುವುದು ರಾಷ್ಟ್ರೀಯ ದಾಖಲೆ ಎಂದವರು ತಿಳಿಸಿದರು.
ಅಪೆಕ್ಸ್/ನಬಾರ್ಡ್ ಪ್ರಶಸ್ತಿ:ಬ್ಯಾಂಕ್ ನ ಸಾಧನೆ
ದೇಶದ ಗಮನ ಸೆಳೆದಿರುವ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಸರ್ವಾಂಗೀಣ ನಿರ್ವಹಣೆಗೆ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ 19 ಬಾರಿ ದೊರೆತಿರುವುದು ಬ್ಯಾಂಕ್ನ ಕಾರ್ಯಸಾಧನೆಗೆ ಸಂದ ಪುರಸ್ಕಾರ. ಸ್ವಸಹಾಯ ಗುಂಪುಗಳ ನಿರ್ವಹಣೆಗೂ ನಬಾರ್ಡ್ ಪ್ರಶಸ್ತಿ 17 ಬಾರಿ ಬ್ಯಾಂಕಿಗೆ ದೊರೆತಿದೆ ಎಂದರು.
ಬ್ಯಾಂಕಿನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರಾದ ಬಿ. ನಿರಂಜನ್, ಟಿ.ಜಿ. ರಾಜಾರಾಮ ಭಟ್, ಭಾಸ್ಕರ್ ಎಸ್. ಕೋಟ್ಯಾನ್, ದೇವಿ ಪ್ರಸಾದ್ ಶೆಟ್ಟಿ ಬೆಳದಪು, ಎಂ. ವಾದಿರಾಜ ಶೆಟ್ಟಿ, ಕೆ.ಎಸ್. ದೇವರಾಜ್, ರಾಜು ಪೂಜಾರಿ, ಶಶಿಕುಮಾರ್ ರೈ ಬಿ., ಎಸ್.ಬಿ.ಜಯರಾಮ ರೈ, ಮೋನಪ್ಪ ಶೆಟ್ಟಿ ಎಕ್ಕಾರು, ಕೆ. ಹರಿಶ್ಚಂದ್ರ, ಎಂ. ಮಹೇಶ್ ಹೆಗ್ಡೆ, ಕೆ. ಜೈರಾಜ್ ಬಿ. ರೈ, ಬಿ. ಅಶೋಕ್ ಕುಮಾರ್ ಶೆಟ್ಟಿ, ಸದಾಶಿವಉಳ್ಳಾಲ, ಬಿ. ರಾಜೇಶ್ ರಾವ್, ಸಹಕಾರಿ ಸಂಘಗಳ ಉಪನಿಬಂಧಕ ಬಿ.ಕೆ. ಸಲೀಂ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಬಿ., ಮಹಾ ಪ್ರಬಂಧಕ ಗೋಪಿನಾಥ್ ಭಟ್ ಹಾಗೂ ಬ್ಯಾಂಕಿನ ಅಧಿಕಾರಿಗಳು ಉಪಸ್ಥಿತರಿದ್ದರು.












