ಮಂಗಳೂರು: ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳು ವಿಳಂಭವಾಗಿ ದೊರಕುವುದನ್ನು ತಪ್ಪಿಸಲು ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲಾರಂಭದ ದಿನವೇ ಪಠ್ಯಪುಸ್ತಕ, ಸಮವಸ್ತ್ರ ಹಾಗೂ ಸೈಕಲ್ಗಳನ್ನು ವಿತರಿಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ಅವರು ಸೋಮವಾರ ಬಂಟ್ವಾಳ ತಾಲೂಕಿನ ದಡ್ಡಲಕಾಡು ಗ್ರಾಮದಲ್ಲಿನ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಾತನಾಡಿದರು.
ಪಠ್ಯಪುಸ್ತಕಗಳು ತಿಂಗಳುಗಳ ಕಾಲ ದೊರಕದೆ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗುತ್ತಿರುವುದು ಸರಕಾರದ ಗಮನಕ್ಕೆ ಬಂದಿದೆ. ಇದಲ್ಲದೇ, ಸಮವಸ್ತ್ರ ಹಾಗೂ ಸೈಕಲ್ ವಿತರಣೆ ಕೂಡಾ ಸಕಾಲಕ್ಕೆ ಆಗದಿರುವುದರಿಂದ ಇಡೀ ಶೈಕ್ಷಣಿಕ ವರ್ಷ ಇವುಗಳತ್ತ ಶಿಕ್ಷಕರು, ವಿದ್ಯಾರ್ಥಿಗಳು ಚಿಂತಿಸುತ್ತಿರುವುದು ತಿಳಿದುಬಂದಿದೆ. ಇದನ್ನು ತಪ್ಪಿಸಲು ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲಾ ತರಗತಿಗಳು ಆರಂಭವಾಗುವ ಮೊದಲ ದಿನವೇ ಪಠ್ಯಪುಸ್ತಕ, ಸಮವಸ್ತ್ರ ಹಾಗೂ ಸೈಕಲ್ಗಳನ್ನು ವಿತರಿಸಲಾಗುವುದು. ಈ ನಿಟ್ಟಿನಲ್ಲಿ ಈಗಾಗಲೇ ರಾಜ್ಯ ಸರಕಾರ ಅಗತ್ಯ ಪ್ರಕ್ರಿಯೆಗಳನ್ನು ಆರಂಭಿಸಿದೆ ಎಂದರು.
ದಡ್ಡಲಕಾಡು ಸರಕಾರಿ ಶಾಲೆಯ ಪ್ರಗತಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಕೇವಲ 4 ವರ್ಷಗಳಲ್ಲೇ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ 30 ರಿಂದ 640ಕ್ಕೆ ಏರಿರುವುದು ರಾಜ್ಯದ ಶೈಕ್ಷಣಿಕ ಚಟುವಟಿಕೆಗಳಲ್ಲೇ ದಾಖಲೆಯಾಗಿದೆ. ಈ ಶಾಲೆಗೆ ಭೇಟಿ ನೀಡಿರುವುದು ತನ್ನ ಜೀವನದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ದಿನವಾಗಿದೆ. ಈ ಶಾಲ ಕರ್ನಾಟಕದ ಎಲ್ಲಾ ಶಾಲೆಗಳಿಗೂ ಮಾದರಿಯಾಗಿದೆ ಎಂದು ಸುರೇಶ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಸ್ಥಳೀಯರ ಬೇಡಿಕೆಯಂತೆ ಮುಂದಿನ ಶೈಕ್ಷಣಿಕ ವರ್ಷದಿಂದ ದಡ್ಡಲಕಾಡಿನಲ್ಲಿ ಸರಕಾರಿ ಪ್ರೌಢಶಾಲೆ ಮಂಜೂರು ಮಾಡಲಾಗುವುದು. ಅಲ್ಲದೇ, ಸರಕಾರದಿಂದ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಸಚಿವರು ಈ ಸಂದರ್ಭದಲ್ಲಿ ಪ್ರಕಟಿಸಿದರು.
ಸಮಾರಂಭದಲ್ಲಿ ಶಾಸಕ ರಾಜೇಶ್ ನಾಯಕ್, ಜಿ.ಪಂ. ಸದಸ್ಯ ತುಂಗಪ್ಪ ಬಂಗೇರ, ಪ್ರಭಾರ ಡಿಡಿಪಿಐ ಜ್ಞಾನೇಶ್, ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ರಾಜಲಕ್ಷ್ಮೀ, ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಆಂಚನ್ ಮತ್ತಿತರರು ಉಪಸ್ಥಿತರಿದ್ದರು.
ಸಚಿವರು ಇದಕ್ಕೂ ಮೊದಲು ಶಾಲಾ ವಿದ್ಯಾರ್ಥಿಗಳಿಗೆ ರಾಜ್ಯ ಸರಕಾರದಿಂದ ನೀಡಿದ ಉಚಿತ ಸೈಕಲ್ಗಳನ್ನು ವಿತರಿಸಿದರು. ಶಾಲೆಯ ತರಗತಿ ಕೊಠಡಿಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿದರು.