ಮಂಗಳೂರು: ಭಾವೈಕ್ಯ, ಸ್ಫೂರ್ತಿ, ಸಂಭ್ರಮದ ಪ್ರತೀಕವಾದ ದಕ್ಷಿಣ ಭಾರತದ ಕೇರಳದಲ್ಲಿ ಆಚರಿಸಲ್ಪಡುವ ಅತಿದೊಡ್ಡ ಹಬ್ಬ ಓಣಂ. ಈ ಹಬ್ಬವನ್ನು ಮಂಗಳೂರಿನ ಕರಾವಳಿ ಕಾಲೇಜಿನಲ್ಲಿ ಶನಿವಾರ ವಿದ್ಯಾರ್ಥಿಗಳು, ಶಿಕ್ಷಕರು ಸೇರಿ ಸಂಭ್ರಮದಿಂದ ಆಚರಿಸಿದರು.
ಬಣ್ಣ ಬಣ್ಣದ ಹೂವುಗಳೊಂದಿಗೆ ವಿದ್ಯಾರ್ಥಿಗಳ ಚಿಟ್ ಚಾಟ್. ಹಬ್ಬದ ಸಂಭ್ರಮಕ್ಕೆ ನೃತ್ಯದ ಸಾಥ್. ಕೇರಳದ ಸಂಸ್ಕೃತಿ ಕಳಕಳಿ, ಚೆಂಡುವಾದನ, ಕರಾವಳಿ ಹುಲಿ ವೇಷದ ಜತೆಗೆ ಮಲಯಾಳಿಗರು ತಮ್ಮ ಸಂಸ್ಕೃತಿಯ ದಿರಿಸು ಧರಿಸಿ ಭಾವೈಕ್ಯ, ಸ್ಫೂರ್ತಿ, ಸಂಭ್ರಮದ ಪ್ರತೀಕವಾಗಿ ಕಾಲೇಜು ರಂಜಿಸುತ್ತಿತ್ತು.
ಪ್ರಮುಖವಾಗಿ ಕೇರಳ ರಾಜ್ಯದಲ್ಲಿ ಆಚರಿಸಲ್ಪಡುವ ಓಣಂ ಹಬ್ಬಕ್ಕೂ ಮಂಗಳೂರಿಗೂ ನಂಟಿದೆ. ಓಣಂ ಹಬ್ಬವು ಕೇರಳದ ರಾಷ್ಟ್ರೀಯ ಹಬ್ಬವಾಗಿದ್ದು, ಇದನ್ನು ಕೇರಳಿಗರು ಹೇಗೆ ಸಂಭ್ರಮ ಮತ್ತು ಸಡಗರದಿಂದ ಆಚರಿಸುತ್ತಾರೋ ಅದೇ ರೀತಿ ಮಂಗಳೂರಲ್ಲೂ ಓಣಂ ಅನ್ನು ಆಚರಿಸಲಾಗುತ್ತದೆ. ತುಳುನಾಡಿನಲ್ಲಿ ದೀಪಾವಳಿ ಹಬ್ಬದ ಸಂದರ್ಭ ಬಲಿಚಕ್ರವರ್ತಿ ಭೂಮಿಗೆ ಬರುವಂತೆ, ಕೇರಳದಲ್ಲಿ ಓಣಂ ಹಬ್ಬದ ಸಂದರ್ಭ ಬಲಿ ಚಕ್ರವರ್ತಿ ಬರುತ್ತಾನೆ ಎಂಬ ನಂಬಿಕೆ ಇದೆ. ಸೆಪ್ಟೆಂಬರ್ ನಲ್ಲಿ ಬರುವ ಈ ಹಬ್ಬವು ಮಲಯಾಳಂ ಮಾಸದ ಚಿಂಗಮ್ ಮಾಸದಂದೇ ಬರುತ್ತದೆ. ಕ್ಯಾಲೆಂಡರ್ ಪ್ರಕಾರವಾಗಿ ಚಿಂಗಮ್ ಮಾಸವು ವರ್ಷದ ಆರಂಭ ಮಾಸದಲ್ಲೇ ಬರುತ್ತದೆ. ಮಂಗಳೂರಲ್ಲಿ ಪ್ರಥಮವಾಗಿ ಓಣಂ ಆಚರಣೆಗೆ ನಾಂದಿ ಹಾಡಿದ ಕರಾವಳಿ ಕಾಲೇಜು ಸತತ 23 ವರ್ಷಗಳಿಂದ ಈ ಹಬ್ಬವನ್ನು ಅತ್ಯಂತ ಸಡಗರದಿಂದ ಆಚರಿಸುತ್ತಿದೆ.
ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿರೋ ಓಣಂನ ಪ್ರತಿಯೊಂದು ದಿನದಂದು ಹೊಸ ಹೊಸ ಹೂಗಳ ಪದರವನ್ನು ನಿರ್ಮಿಸಲಾಗುತ್ತದೆ. ಓಣಂನ ಕೊನೆಯ ದಿನದಂದು ಬಾಳೆಎಲೆಯಲ್ಲಿ ಖಾದ್ಯಭಕ್ಷ್ಯಗಳನ್ನು ಇರಿಸಿ ಈ ಕೂಟವನ್ನು ಏರ್ಪಡಿಸಲಾಗುತ್ತದೆ.
ವಳ್ಳಂ ಕಳಿ ಎಂಬ ಬೋಟ್ ರೇಸ್ ಹಾಗೂ ಆನೆ ಮೆರವಣಿಗೆ ಕೂಡಾ ನಡೆಯುತ್ತದೆ. ಓಣಂ ಸಮಯದಲ್ಲಿ ಬೇರೆ ಬೇರೆ ಆಟಗಳನ್ನು ಏರ್ಪಡಿಸಲಾಗುತ್ತದೆ. ತಲಕ್ ಪಂತ್ ಕಲಿ ಎಂಬುದು ಹೆಚ್ಚು ಪ್ರಸಿದ್ಧ ಆಟವಾಗಿದೆ. ವಿದ್ಯಾರ್ಥಿನಿಯರು ಬೇರೆ ಬೇರೆ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸಿದರು. ಜೊತೆಗೆ ಫ್ಯಾಷನ್ ಷೋ, ಹುಲಿವೇಷ, ಕೈ ಕೊತ್ತಿಕಲಿ ನೃತ್ಯ ಹೀಗೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳು ತಮ್ಮ ಪ್ರತಿಭಾ ಪ್ರದರ್ಶನ ನೀಡಿ ಸಂಭ್ರಮಪಟ್ಟರು.
ಸರ್ವಧರ್ಮ ಸಮಾನತೆಯ ಸಂಕೇತವಾಗಿರೋ ಓಣಂ ಹಬ್ಬವು ಹಲವಾರು ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕತೆಯ ಎಳೆಗಳೊಂದಿಗೆ ಬೆಸೆದುಕೊಂಡಿದೆ. ಕರಾವಳಿಯ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸಕ್ಕೆ ಎಂದು ಆಗಮಿಸುವ ವಿದ್ಯಾರ್ಥಿಗಳಿಗೆ ಒಣಂ ಆಚರಣೆಗಾಗಿತಮ್ಮ ಊರುಗಳಿಗೆ ಹೋಗೋಕೆ ಸಾಧ್ಯವಾಗದು. ಹೀಗಾಗಿ ತಮ್ಮ ವಿದ್ಯಾಸಂಸ್ಥೆಯಲ್ಲಿಯೇ ಅದ್ದೂರಿಯಾಗಿ ಓಣಂ ಆಚರಣೆ ಮಾಡಲಾಗುತ್ತದೆ.