ನೇತ್ರಾವತಿ ನದಿ ಸೇತುವೆಗೆ ಸಿಸಿಟಿವಿ ಕ್ಯಾಮೆರಾ: ಶಾಸಕ ಕಾಮತ್

ಮಂಗಳೂರು: ಮಂಗಳೂರಿನಿಂದ ಉಳ್ಳಾಲಕ್ಕೆ ತೆರಳುವ ರಸ್ತೆಯಲ್ಲಿ ಪ್ರಮುಖವಾಗಿ ಸಿಗುವ ನೇತ್ರಾವತಿ ಸೇತುವೆ ಅಥವಾ ಉಳ್ಳಾಲ ಸೇತುವೆಗೆ ಸಿಸಿಟಿವಿ ಅಳವಡಿಸಲು ಚಿಂತನೆ ನಡೆಸಿದ್ದು, ಈ ಬಗ್ಗೆ ಮುಂದಿನ ದಿನಗಳಲ್ಲಿ  ಜಿಲ್ಲಾಧಿಕಾರಿಯವರೊಂದಿಗೆ ಸಮಾಲೋಚಿಸುತ್ತೇನೆ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ.
ನೇತ್ರಾವತಿ ಸೇತುವೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಅಪಾಯಕಾರಿ ತಾಣವಾಗಿ ಪರಿಣಮಿಸುತ್ತದೆ. ಆತ್ಮಹತ್ಯೆಯಂತಹ ಅಹಿತಕರ ಘಟನೆಗಳಿಗೆ ಇದು ಕಾರಣವಾಗುತ್ತಿದೆ. ಸಿಸಿಟಿವಿಗಳನ್ನು ಅಳವಡಿಸುವುದರಿಂದ ಸೇತುವೆಯ ಮೇಲೆ ನಡೆದ ದುರ್ಘಟನೆಗಳನ್ನು ತಕ್ಷಣ ಪರಿಶೀಲಿಸಲು ಅನುಕೂಲವಾಗುತ್ತದೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವುದರಿಂದ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಸಮಯ ಮತ್ತು ಶ್ರಮ ವ್ಯರ್ಥವಾಗುವುದಿಲ್ಲ. ಮನೆಯಿಂದ ನಾಪತ್ತೆಯಾಗುವ ವ್ಯಕ್ತಿಗಳ ಬಗ್ಗೆ ಇಂತಹ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳು ನಾಪತ್ತೆಯಾದವರ ಮನೆಯವರಿಗೆ, ಗೆಳೆಯರಿಗೆ ಹಾಗೇ ನಾಪತ್ತೆ ಪ್ರಕರಣಗಳ ತನಿಖೆ ನಡೆಸುವ ಪೊಲೀಸ್ ಅಧಿಕಾರಿಗಳಿಗೆ ಅನುಕೂಲವಾಗುತ್ತದೆ. ಒಟ್ಟಿನಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆಯಿಂದ ಪೊಲೀಸ್ ಇಲಾಖೆಗೆ ತನಿಖೆಗೆ ಸಹಕಾರಿಯಾಗುವುದನ್ನು ದೃಷ್ಟಿಯಲ್ಲಿಟ್ಟು ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಶಾಸಕ ವೇದವ್ಯಾಸ  ಕಾಮತ್ ತಿಳಿಸಿದ್ದಾರೆ.