ಉಸೇನ್ ಬೋಲ್ಟ್ ಓಟ ಮೀರಿಸಿದ ಶ್ರೀನಿವಾಸ ಗೌಡ: ಕಂಬಳದ ಓಟಗಾರನಿಗೆ ಭಾರೀ ಪ್ರಶಂಸೆ

ಮಂಗಳೂರು: ಜಗತ್ತಿನಲ್ಲಿ ಅತ್ಯಂತ ವೇಗದ ಓಟಗಾರರ ಅಂದ್ರೆ ತಟ್ಟನೆ ನೆನಪಿಗೆ ಬರುವುದು ಉಸೇನ್ ಬೋಲ್ಟ್. ವೇಗದ ಓಟದಲ್ಲಿ ಈತನದ್ದು ವಿಶ್ವದಾಖಲೆ. ಆದ್ರೆ ಈತನನ್ನು ಮೀರಿಸಿದ ಓಟಗಾರ ಇದ್ದಾನೆ ಅದು ಕಡಲ ನಗರಿ ನಮ್ಮ ಮಂಗಳೂರಿನಲ್ಲಿ. ಅದು ಬರೀ ಕಾಲಿನಲ್ಲಿ. ಕೆಸರು ಗದ್ದೆಯಲ್ಲಿ. ಜನಪದ ಕ್ರೀಡೆ ಕಂಬಳ ಕೂಟದಲ್ಲಿ.
ಹೌದು ಉಸೇನ್ ಬೋಲ್ಟ್ 2009ರಲ್ಲಿ 100 ಮೀಟರ್ ಓಟವನ್ನು ಕೇವಲ 9.58 ಕ್ರಮಿಸಿದ್ದು ವಿಶ್ವದಾಖಲೆ. ಆದರೆ ಈ ದಾಖಲೆ ಮೀರಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಮಿಜಾರು ಶ್ರೀನಿವಾಸ ಗೌಡ ಎಂಬ 28 ರ ಯುವಕ.
ಜಿಲ್ಲೆಯ ಐಕಳ ಬಾವಾ ಎಂಬಲ್ಲಿ ಫೆ.೧ ರಂದು ನಡೆದ ಕಂಬಳ ಕೂಟದಲ್ಲಿ ಶ್ರೀನಿವಾಸ ಗೌಡ ಅವರು 142.50 ಮೀಟರ್ ಉದ್ದದ ಕಂಬಳದ ಕರೆಯನ್ನು ಕೇವಲ 13.62 ಸೆಕೆಂಡ್ ‌ನಲ್ಲಿ ಕ್ರಮಿಸಿದ್ದಾರೆ. ಇದನ್ನು 100 ಮೀಟರ್ ತಾಳೆ ಹಾಕಿದಾಗ 9.55 ಸೆಕೆಂಡ್. ಅಂದ್ರೆ ಕಂಬಳ ಓಟಗಾರ ಶ್ರಿನಿವಾಸ ಗೌಡ ಕೆಸರು ಗದ್ದೆಯಲ್ಲಿ ಬೋಲ್ಟ್ ಗಿಂತ 0.03 ಸೆಕೆಂಡ್ ಮುಂದೆ ಕ್ರಮಿಸಿದ್ದಾರೆ.
ಕಂಬಳದಲ್ಲಿ ಎಲೆಕ್ಟ್ರಾನಿಕ್ ಮಾಪನ ಮೂಲಕ ವೇಗದ ಅಳತೆ
ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ನವೆಂಬರ್ ನಲ್ಲಿ ಪ್ರಾರಂಭವಾಗುವ ಕಂಬಳ ಒಟ್ಟು 21 ಕಡೆಗಳಲ್ಲಿ ನಡೆಯುತ್ತದೆ. ಎಲ್ಲ ಕಂಬಳ ಸಂಘಟಕರು ಸೇರಿ ಸಮಿತಿ ರಚನೆ ಮಾಡಿ ನಿಯಮ ರೂಪಿಸಿಕೊಳ್ಳುತ್ತಾರೆ. ಅದೇ ನಿಯಮದಂತೆ ಎಲ್ಲ ಕಂಬಳ ಕೂಟಗಳು ನಡೆಯುತ್ತದೆ ಅಲ್ಲದೇ ವೇಗವನ್ನು ಅಳೆಯುದಕ್ಕೆ, ಫಲಿತಾಂಶವನ್ನು ನಿಖರವಾಗಿ ದಾಖಲಿಸುವುದಕ್ಕೆ ಎಲೆಕ್ಟ್ರಾನಿಕ್ ತಂತ್ರಜ್ಞಾನ ಬಳಕೆ ಆಗುತ್ತದೆ ಅದರಂತೆ ಶ್ರೀನಿವಾಸ ಗೌಡ ಅವರು ಓಟ ಕೂಡ ಈ ತಂತ್ರಜ್ಞಾನದಲ್ಲಿ ದಾಖಲಾಗಿದೆ. ಸಾಮಾನ್ಯವಾಗಿ ಕಂಬಳ ಕೂಟದಲ್ಲಿ 14/16 ಸೆಕೆಂಡ್ ಓಡುವ ಕಂಬಳದ ಓಟಗಾರರು ಇದ್ದಾರೆ ಆದರೆ ಶ್ರೀನಿವಾಸ ಗೌಡರ 9.55 ದಾಖಲೆ ಇದೇ ಮೊದಲು.
ಶ್ರೀನಿವಾಸ ಗೌಡ ಅವರು ಓಟಕ್ಕೆ ಅಂತ ಯಾವುದೇ ವಿಶೇಷ ತರಬೇತಿ ಪಡೆದವರಲ್ಲ, ನಿಯಮಿತ ಆಹಾರ ಜಿಮ್ ಹೋಗಿಲ್ಲ, ಆದರೂ ಸಿಕ್ಟ್ ಪ್ಯಾಕ್ ದೇಹ ಇವರದ್ದು, 10 ತರಗತಿ ವರೆಗೆ ಶಿಕ್ಷಣ ಪಡೆದ ಇವರು ತನ್ನ 18 ನೇ ವರ್ಷಕ್ಕೆ ಕಂಬಳ ಓಟಗಾರನಾಗಿ 10 ವರ್ಷದಲ್ಲಿ ಹಲವು ಪದಕಗಳನ್ನು ತನ್ನ ಕೋಣದ ಮಾಲಿಕರಿಗೆ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಕಂಬಳ ಕೂಟದಲ್ಲಿ ಕೊಬ್ಬಿದ ಕೋಣಗಳನ್ನು, ಕೆಸರಿನಲ್ಲಿ ಓಡಿಸುವುದು ಅಷ್ಟು ಸುಲಭದ ಮಾತಲ್ಲ, ಒಂದು ಕೈಯಲ್ಲಿ ಓಡುವ ಕೋಣಗಳಿಗೆ ಕಟ್ಟಿದ ಹಗ್ಗ, ಮತ್ತೊಂದು ಕೈಯಲ್ಲಿ ಬೆತ್ತ ಹಿಡಿದು ಓಡುವುದು ಅಥ್ಲೆಟಿಕ್ ಟ್ರಾಕ್ ‌ನಲ್ಲಿ ಓಡಿದ ಹಾಗೆ ಅಲ್ಲ, ಆದ್ರೆ ಇಂತಹ ಮಹಾನ್ ಸಾಧನೆ ಮಾಡಿದ ಕಂಬಳ ವೀರನಿಗೆ ತುಳುನಾಡಿನಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ.