ಮಂಗಳೂರು: ಕದ್ರಿ ಹಿಂದೂ ರುದ್ರ ಭೂಮಿಯ ಕುಸಿದ ತಡೆಗೋಡೆ ಪುನರ್ನಿರ್ಮಾಣ ಕಾಮಗಾರಿಗೆ ಶಾಸಕ ಡಿ.ವೇದವ್ಯಾಸ್ ಕಾಮತ್ ಅವರು ಗುದ್ದಲಿಪೂಜೆ ನೆರವೇರಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಅವರು, ಮಂಗಳೂರು ನಗರದಲ್ಲಿ ಜನರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪೂರ್ಣ ಪ್ರಮಾಣದಲ್ಲಿ ಶ್ರಮ ವಹಿಸುತ್ತೇನೆ. ಕುಡಿಯುವ ನೀರು, ವಿದ್ಯುತ್, ರಸ್ತೆ ಕಾಮಗಾರಿಗಳ ಜೊತೆಯಲ್ಲಿ ಮನುಷ್ಯನ ದೇಹ ಮಣ್ಣಾಗಿಸುವ ರುದ್ರಭೂಮಿಯೂ ಕೂಡ ಅಭಿವೃದ್ಧಿ ಕಾಣಬೇಕಿದೆ. ಆ ನಿಟ್ಟಿನಲ್ಲಿ ಸಾರ್ವಜನಿಕರ ಬೇಡಿಕೆಯ ಮೇರೆಗೆ ಕದ್ರಿ ಹಿಂದೂ ರುದ್ರಭೂಮಿಯ ತಡೆಗೋಡೆ ಪುನರ್ನಿರ್ಮಾಣ ಕಾಮಗಾರಿಗೆ 10 ಲಕ್ಷ ರೂಪಾಯಿ ಅನುದಾನ ಒದಗಿಸಲಾಗಿದೆ ಎಂದರು.
ಮುಂದಿನ ಮೂರು ವರ್ಷಗಳ ಕಾಲಾವಕಾಶ ನನ್ನ ಕ್ಷೇತ್ರವನ್ನು ಸರ್ವ ವಿಧದಲ್ಲೂ ಅಭಿವೃದ್ಧಿಪಡಿಸುವುದಷ್ಟೇ ನನ್ನ ಗುರಿಯಾಗಿದೆ. ರಾಜ್ಯ ಸರಕಾರ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ವಿವಿಧ ಅನುದಾನಗಳನ್ನು ಜೋಡಿಸಿ ಮಂಗಳೂರು ನಗರ ದಕ್ಷಿಣ ವಿಧಾನ ಸಭಾ ಕ್ಷೇತ್ರವನ್ನು ಅಭಿವೃದ್ಧಿಗೊಳಿಸುವ ಮೂಲಕ ಜನರ ನಂಬಿಕೆ ಹುಸಿಯಾಗದಂತೆ ನಡೆದುಕೊಳ್ಳುತ್ತೇನೆ ಎಂದಿದ್ದಾರೆ.
ಈ ಸಂಧರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ ಕದ್ರಿ ಮನೋಹರ್ ಶೆಟ್ಟಿ, ದಿವಾಕರ್ ಪಾಂಡೇಶ್ವರ್, ಬಿಜೆಪಿ ಜಿಲ್ಲಾ ಕಾರ್ಯಕಾರಣಿ ಸದಸ್ಯ ವಸಂತ್ ಜೆ. ಪೂಜಾರಿ, ಸ್ಥಳೀಯರಾದ ದಿನೇಶ್ ದೇವಾಡಿಗ ಕದ್ರಿ, ರೇಶವ ಕದ್ರಿ, ದಿನೇಶ್ ರಾಜ್ ಅಂಚನ್, ಶ್ರೀನಿವಾಸ್ ಶೆಟ್ಟಿ, ತಾರಾನಾಥ್ ಶೆಟ್ಟಿ, ನಿರಂಜನ್ ಸಾಲ್ಯಾನ್, ಭರತ್ ಭೂಷಣ್ ನಂತೂರು, ಗಾಡ್ವಿನ್ ಕದ್ರಿ, ಶ್ರೀಕಾಂತ್ ರಾವ್, ರೂಪೇಶ್ ಶೇಟ್, ರಾಘವೇಂದ್ರ ಉರ್ವತ್ತಾಯ, ಕೇಶವ ಸಾಲ್ಯಾನ್, ಸಂಜೀವ ಅಡ್ಯಾರ್, ಹರೀಶ್ ರಾವ್, ರಾಮ್ ಮೋಹನ್ ಶೇಟ್ ಮುಂತಾದವರು ಉಪಸ್ಥಿತರಿದ್ದರು.