ಬೆಂಗಳೂರು: ಕರ್ನಾಟಕ ವಿಧಾನಸಭೆಯ ಸ್ಪೀಕರ್ ಸ್ಥಾನಕ್ಕೆ ಮಂಗಳೂರು ಶಾಸಕ ಯುಟಿ ಖಾದರ್ ಅವರನ್ನು ಅಂತಿಮಗೊಳಿಸಲಾಗಿದೆ.
ಪ್ರಸ್ತುತ ಆರ್.ವಿ.ದೇಶಪಾಂಡೆ ಹಂಗಾಮಿ ಸ್ಪೀಕರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸ್ಪೀಕರ್ ಸ್ಥಾನಕ್ಕೆ ಗದಗ ಶಾಸಕ ಎಚ್‌ಕೆ ಪಾಟೀಲ್, ಶಿರಾ ಶಾಸಕ ಟಿಬಿ ಜಯಚಂದ್ರ, ಮಧುಗಿರಿ ಶಾಸಕ ಕೆಎನ್ ರಾಜಣ್ಣ, ಮುದ್ದೇಬಿಹಾಳ ಶಾಸಕ ಸಿಎಸ್ ಅಪ್ಪಾಜಿ ನಾಡಗೌಡ ಸೇರಿದಂತೆ ಹಲವು ಹಿರಿಯ ಶಾಸಕರ ಹೆಸರನ್ನು ಪರಿಗಣಿಸಲಾಗಿತ್ತು.
ಮೂಲಗಳ ಪ್ರಕಾರ, ಸೋಮವಾರ ರಾತ್ರಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರು ಖಾದರ್ ಅವರಿಗೆ ದೂರವಾಣಿ ಕರೆ ಮಾಡಿದ್ದು, ಅವರನ್ನು ವಿಧಾನಸಭಾ ಸ್ಪೀಕರ್ ಹುದ್ದೆಗೆ ಹೆಸರಿಸಿದ್ದಾರೆ. ಇದಕ್ಕೆ ಖಾದರ್ ಒಪ್ಪಿಗೆ ಸೂಚಿಸಿದ್ದು, ಮಂಗಳವಾರ ಉಮೇದುವಾರಿಕೆಗೆ ನಾಮಪತ್ರ ಸಲ್ಲಿಸಲಿದ್ದಾರೆ.
ಸ್ಪೀಕರ್ ಸ್ಥಾನಕ್ಕೆ ಬುಧವಾರದಂದು ಚುನಾವಣೆ ನಡೆಯಲಿದೆ.