ಕೊರೊನ ವಾರಿಯರ್ಸ್‌ ಹಲ್ಲೆ ಪ್ರಕರಣ ಗಂಭೀರವಾಗಿ‌ ಪರಿಗಣಿಸಲಾಗಿವುದು: ಸಚಿವ ಕೋಟ

ಮಂಗಳೂರು: ಕೊರೋನಾ ವಾರಿಯರ್ಸ್ ಗಳಾಗಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು, ಪೊಲೀಸರು, ಆಶಾ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣಗಳು ನಡೆದರೆ ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಹಲ್ಲೆ ಮಾಡಿದವರನ್ನು ಗೂಂಡಾ ಕೇಸ್ ಹಾಕುವ ಮೂಲಕ ಜೈಲಿಗಟ್ಟಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಸಿದ್ದಾರೆ.
ದ.ಕ.ಜಿಲ್ಲಾ ಕಾರ್ಯ ನಿರತ  ಪತ್ರಕರ್ತರ  ಸಂಘದ ಸದಸ್ಯರಿಗೆ ಎಸ್ ಸಿಡಿಸಿಸಿ ಬ್ಯಾಂಕ್  ವತಿಯಿಂದ ನೀಡಿರುವ ದಿನಸಿ ಸಾಮಾಗ್ರಿಗಳನ್ನು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಹಸ್ತಾಂತರ ಮಾಡಿ ಮಾತನಾಡಿದರು.
ಕೊರೋನಾ ವಾರಿಯರ್ಸ್ ಗಳ ಮೇಲೆ ಹಲ್ಲೆ ಪ್ರಕರಣಗಳು ನಡೆಯುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಪೊಲೀಸರಿಗೆ ಲಾಠಿ, ರಿವಾಲ್ವರ್ ಕೊಟ್ಟಿರುವುದು, ಪ್ರದರ್ಶನಕ್ಕೆ ಅಲ್ಲ, ಜೀವ‌ರಕ್ಷಣೆಗಾಗಿ ಆದರೆ ಅವರ ಮೇಲೆಯೇ ಹಲ್ಲೆ ನಡೆಯುವುದನ್ನು ಸಹಿಸಲಾಗದು. ಕಠಿಣ ಕ್ರಮ ಅನಿವಾರ್ಯ ಎಂದರು.
ಜನರಿಗೆ ಮುಜರಾಯಿ ಇಲಾಖೆಯ ವತಿಯಿಂದ ಪ್ರತೀ ದೇವಸ್ಥಾನಗಳಲ್ಲೂ ಆಹಾರ ವಿತರಿಸಲಾಗುತ್ತಿದೆ. ಕೊರೋನಾ ನಿಯಂತ್ರಣಕ್ಕಾಗಿ ಎಲ್ಲರ ಸಹಕಾರ ಅಗತ್ಯ. ಕೊರೋನಾ ತಪಾಸಣೆಗೆ ಹೋದವರ ಮೇಲೆ ಹಲ್ಲೆಗೆ ಯಾರಾದರೂ ಮುಂದಾದಲ್ಲಿ ಯಾವುದೇ ಮುಲಾಜಿಲ್ಲದೆ ಕ್ರಮ‌ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಸಾಮಾಜಿಕ ಅಂತರ ಕಾಯ್ದುಕೊಂಡು ಬದುಕುವ ಅನಿವಾರ್ಯತೆಗೆ ನಾವು ತಲುಪಿದ್ದೇವೆ. ಗಡಿಗಳ ನಡುವಿನ ಸಂಪರ್ಕವೇ ಕಡಿದು ಹೋಗಿದೆ. ಕೂಲಿ ಕಾರ್ಮಿಕರು, ಸಣ್ಣ ಸಣ್ಣ ಕೆಲಸ ಮಾಡೊಕೊಂಡಿದ್ದ ಮಂದಿಯ ಜೀವನವೇ ಕುಸಿದಿದೆ. ಇಂತಹ ಪರಿಸ್ಥಿತಿ ನಡುವೆಯೂ ನಾವು ನಿಮ್ಮ ಜೊತೆಗಿದ್ದೇವೆ ಎನ್ನುವವರೂ ನಮ್ಮ ಜೊತೆಗಿರುವುದು ಅಭಿನಂದನೀಯ ಎಂದು ಸಚಿವರು ಹೇಳಿದರು.
ಎಸ್ ಸಿಡಿಸಿಸಿ ಬ್ಯಾಂಕ್ ನ ಅಧ್ಯಕ್ಷ ಡಾ.ಎಂಎನ್.ರಾಜೇಂದ್ರ ಕುಮಾರ್ ಮಾತನಾಡಿ,ಇಂತಹ ತುರ್ತು ಸಂದರ್ಭದಲ್ಲಿ ಪ್ರತಿಯೊಬ್ಬರು ಕೂಡ ಸಂಕಷ್ಟದಲ್ಲಿ ಇರುವವರಿಗೆ ಮಾನವೀಯ ನೆಲೆಯಲ್ಲಿ ಸ್ಪಂದಿಸಬೇಕು. ಯಾವುದೇ ಸಂದರ್ಭದಲ್ಲಿ ಅಗತ್ಯ ನೆರವು ನೀಡಲು ಎಸ್ ಸಿ ಡಿಸಿಸಿ ಬ್ಯಾಂಕ್  ಸಿದ್ಧಎಂದರು. ಶಾಸಕರಾದ ಡಿ.ವೇದವ್ಯಾಸ ಕಾಮತ್, ಡಾ. ವೈ.ಭರತ್ ಶೆಟ್ಟಿ ಉಪಸ್ಥಿತರಿದ್ದರು.
ದ.ಕ. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿದರು.  ಮಾಜಿ ಅಧ್ಯಕ್ಷ ಪಿ.ಬಿ.ಹರೀಶ್ ರೈ ಕಾರ್ಯಕ್ರಮ ನಿರೂಪಿಸಿದರು. ಪುಷ್ಪರಾಜ್ ಬಿ.ಎನ್ ವಂದಿಸಿದರು.