ಮಂಗಳೂರು: ಮರ ಕದ್ದ ಆರೋಪ ಹೊರಿಸಿ ಅಮಾಯಕ ಯುವಕನಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕೊಂಬಾರು ಗ್ರಾಮದ ಕೂಲಿ ಕಾರ್ಮಿಕ ಲೋಕೇಶ್ ಹಲ್ಲೆಗೊಳಗಾದ ಯುವಕ. ಸುಬ್ರಹ್ಮಣ್ಯ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಕೆಲ ದಿನಗಳ ಹಿಂದೆ ಮರ ಕಳ್ಳತನವಾಗಿತ್ತು. ಈ ಪ್ರಕರಣದ ಕುರಿತು ತನಿಖೆ ನಡೆಸೋ ಬದಲಿಗೆ ಅಮಾಯಕ ಕೂಲಿ ಕಾರ್ಮಿಕನನ್ನು ಬಂಧಿಸಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಆರೋಪ ಸುಬ್ರಹ್ಮಣ್ಯ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಳಿ ಬಂದಿದೆ.
ಕೆಲ ದಿನಗಳ ಹಿಂದೆ ಸುಬ್ರಹ್ಮಣ್ಯ ರೇಂಜ್ ನ ಅರಣ್ಯ ರಕ್ಷಕ ಅಶೋಕ ಎಂಬುವವರು ಮತ್ತು ಇತರರು ಸೇರಿ ಸಂಬಂಧಿಕರ ಮನೆಗೆ ಹೋಗುತ್ತಿದ್ದ ಕೊಂಬಾರು ಗ್ರಾಮದ ಕೂಲಿ ಕಾರ್ಮಿಕ ಲೋಕೇಶ್ ಎಂಬ ಯುವಕನನ್ನು ಸುಳ್ಳು ಹೇಳಿ ಖಾಸಗಿ ಕಾರಿನಲ್ಲಿ ಕರೆದುಕೊಂಡು ಹೋಗಿದ್ದರು.
ಅರಣ್ಯ ಇಲಾಖೆಗೆ ಸೇರಿದ ಸುಳ್ಯ ತಾಲೂಕಿನ ಕೊಲ್ಲಮೊಗ್ರು ಗೆಸ್ಟ್ ಹೌಸ್ ನಲ್ಲಿ ಯುವಕನನ್ನು ಕೂಡಿ ಹಾಕಿ ಫಾರೆಸ್ಟ್ ಗಾರ್ಡ್ಗಳು ಸೇರಿ ನಾವು ಹೇಳುವ ಹಾಗೆ ಕೇಳಬೇಕು. ಕಳ್ಳತನ ಆಗಿರೋ ಮರವನ್ನು ನಾನೇ ಕದ್ದಿದ್ದು ಹೌದು ಎಂದು ಒಪ್ಪಿಕೊಳ್ಳಬೇಕು. ಇಲ್ಲದಿದ್ದರೇ ನಿನ್ನನ್ನು ನಡೆದಾಡಲು ಅಗದಂತೆ ಮಾಡುತ್ತೇವೆ ಎಂದು ಹೇಳಿ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.
ಅಲ್ಲದೇ ಆರು ಖಾಲಿ ಹಾಳೆಗೆ ಸಹಿ ಮಾಡಿಸಿಕೊಂಡಿದ್ದಾರೆ. ಈ ಕುರಿತು ನೊಂದ ಯುವಕ ಸಾಮಾಜಿಕ ಸೇವಾ ಸಂಘಟನೆ ನೀತಿ ತಂಡಕ್ಕೆ ದೌರ್ಜನ್ಯದ ಕುರಿತು ಮಾಹಿತಿ ನೀಡಿದ್ದಾರೆ. ಹೀಗಾಗಿ ದೌರ್ಜನ್ಯ ಎಸಗಿದ ಅರಣ್ಯಾಧಿಕಾರಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಹೋರಾಟದ ಎಚ್ಚರಿಕೆಯನ್ನು ಹೋರಾಟಗಾರರು ನೀಡಿದ್ದಾರೆ ಎಂದು ತಿಳಿದು ಬಂದಿದೆ.












