ಮಂಗಳೂರು: ಮಂಗಳೂರಿನ ‌ಮುಕ್ಕಚ್ಚೇರಿ ಕಡಪರದಲ್ಲಿ ನಡೆದಿದ್ದ ಎರಡು ತಂಡಗಳ ನಡುವಿನ ಹೊಡೆದಾಟ ಹಾಗೂ ಗುಂಡು ಹಾರಾಟ ಪ್ರಕರಣಕ್ಕೆ ಸಂಬಂಧಿಸಿ ಹಲವರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಈ ಘಟನೆಯಲ್ಲಿ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಹೈಲ್ ಕಂದಕ್ ಹಾಗೂ ಕಡಪರ ನಿವಾಸಿ ಇರ್ಶಾದ್ ಎಂಬುವವರು ಗಾಯಗೊಂಡಿದ್ದಾರೆ. ವಾಟ್ಸ್‌ಆ್ಯಪ್‌ ಸಂದೇಶದ ವಿಚಾರವಾಗಿ ಸುಹೈಲ್ ಕಂದಕ್ ಮತ್ತು ಕಡಪರ ನಿವಾಸಿ ಸಲ್ಮಾನ್ ಎಂಬುವವರ ತಂಡಗಳ ನಡುವೆ ರಾತ್ರಿ ಹೊಡೆದಾಟ ನಡೆದು ಗುಂಡು ಹಾರಿಸಲಾಗಿತ್ತು.
ಆರಂಭದಲ್ಲಿ ವಾಟ್ಸ್‌ಆ್ಯಪ್ ಸಂದೇಶದ ವಿಚಾರವಾಗಿ ಸುಹೈಲ್ ಕಂದಕ್ ಮತ್ತು ಸಲ್ಮಾನ್ ನಡುವೆ ಮೊಬೈಲ್ ಫೋನ್ ಮೂಲಕ ಮಾತಿನ ಚಕಮಕಿ ನಡೆದಿದೆ. ಇದು ತಾರಕಕ್ಕೇರಿದ್ದು, ಅತ್ತಾವರ ನಿವಾಸಿಯಾಗಿರುವ ಸುಹೈಲ್ ಕಂದಕ್ ಮತ್ತು ತಂಡ ರಾತ್ರಿ 11:30ರ ಸುಮಾರಿಗೆ ಕಡಪರಕ್ಕೆ ತೆರಳಿದ್ದು, ಅಲ್ಲಿ ಇತ್ತಂಡಗಳ ನಡುವೆ ಮಾರಾಮಾರಿ ನಡೆದಿತ್ತು.
ಘಟನೆ ವೇಳೆ ಸುಹೈಲ್ ಕಂದಕ್ ಗುಂಡು ಹಾರಾಟ ನಡೆಸಿದ್ದು, ಇದರಿಂದ ಇರ್ಶಾದ್ ಕಾಲಿಗೆ ಗಾಯಗಳಾಗಿವೆ. ಇದೇ ವೇಳೆ ಸಲ್ಮಾನ್ ಮತ್ತು ತಂಡ ಸುಹೈಲ್ ಮೇಲೆ ದೊಣ್ಣೆಗಳಿಂದ ಹಲ್ಲೆ ನಡೆಸಿದೆ. ಇದರಿಂದ ಅವರು ಕೂಡಾ‌ ಗಾಯಗೊಂಡಿದ್ದಾರೆ. ಶೂಟೌಟ್ ನಡೆಸಿದ ಆಯುಧವನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ, ದೂರು, ಪ್ರತಿದೂರುಗಳು ದಾಖಲಾಗಿವೆ. ಇರ್ಶಾದ್ ನೀಡಿರುವ ದೂರಿನನ್ವಯ ಬಶೀರ್, ಸುಹೈಲ್ ಕಂದಕ್ ಮತ್ತು ತಂಡದ ವಿರುದ್ಧ ದೂರು ದಾಖಲಾಗಿದೆ. ಈ ಸಂಬಂಧ ಹಲವರನ್ನು ಬಂಧಿಸಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಸುಹೈಲ್ ಕಂದಕ್ ನೀಡಿರುವ ದೂರಿನ್ವಯ ಸಲ್ಮಾನ್ ಮತ್ತು 10 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಸಂಬಂಧ ಹಲವರನ್ನು ಬಂಧಿಸಿದ್ದಾರೆ.