ನೆರೆ ಪೀಡಿತ ಹಳ್ಳಿಗೆ ಭೇಟಿ ನೀಡಿ ಸರಕಾರ ಗಮನ ಸೆಳೆಯುವೆ: ಕುಮಾರಸ್ವಾಮಿ

ಮಂಗಳೂರು: ಈ ಭಾಗದ ನೆರೆ ಸಂತ್ರಸ್ತರಿಗೆ ನೆರವು ನೀಡುವ ಸಲುವಾಗಿ ತಾತ್ಕಾಲಿಕ ಪರಿಹಾರ ಕಲ್ಪಿಸುತ್ತಿದ್ದೇವೆ. ಹಳ್ಳಿಯ ಸಂಪೂರ್ಣ ಮಾಹಿತಿ ಪಡೆಯಲು ಸ್ಥಳಕ್ಕೆ ಭೇಟಿ ನೀಡುತ್ತೇನೆ. ಸರಕಾರದ ಗಮನ ಸೆಳೆಯುತ್ತೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.
ಭಾನುವಾರ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಬೆಳ್ತಂಗಡಿಗೆ ಆಗಮಿಸಿದ ಅವರು ಧರ್ಮಸ್ಥಳದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ನೆರೆ ಹಾವಳಿ ಹಿನ್ನೆಲೆಯಲ್ಲಿ ಬೆಳಗಾವಿ ಹಾಗೂ ಕೊಡಗು ಭಾಗದಲ್ಲಿ ಭೇಟಿ ಮಾಡಿದ್ದೇನೆ. ಬೆಳ್ತಂಗಡಿ ಭಾಗದಲ್ಲೂ ದೊಡ್ಡ ಮಟ್ಟದ ಅನಾಹುತ ಆಗಿದೆ. ನಾಳೆ ಮೂಡಿಗೆರೆ ಭಾಗದಲ್ಲಿ ಪ್ರವಾಸ ಮಾಡುತ್ತೇನೆ, ಕಳೆದ ೧೪ ತಿಂಗಳಲ್ಲಿ ಮೈತ್ರಿ ಸರಕಾರದ ಒಳ್ಳೆಯ ಕೆಲಸ ಜನರನ್ನು ತಲುಪಲು ಸಾಧ್ಯವಾಗಲಿಲ್ಲ. ಅದಕ್ಕೆ ಹಲವು ಕಾರಣಗಳಿವೆ, ಅದನ್ನು ಇಲ್ಲಿ ಹೇಳೊದಿಲ್ಲ ಎಂದರು.
ಸದ್ಯ ಬಿಜೆಪಿ ಸರಕಾರ ಜನತೆ ಜೊತೆಗೆ ಚೆಲ್ಲಾಟ ಆಡಬಾರದು. ತಕ್ಷಣ ಹಣದ ಘೋಷಣೆ ಮಾಡಿದ್ದಾರೆ.‌ ಆದರೆ ಅದು ತಲುಪಿದೆಯೇ? ಸಂಪೂರ್ಣ ಮಾಹಿತಿ ಪಡೆದು ಪರಿಹಾರ ಘೋಷಣೆ ಮಾಡಬೇಕಿತ್ತು. ಕೊಡಗಿನಲ್ಲಿ ನಾವು ಯಾವ ರೀತಿ ನಡೆದುಕೊಂಡಿದ್ದೇವೆ ಎನ್ನುದಕ್ಕೆ ಚರ್ಚೆಗೆ ಸಿದ್ದ ,ಯಡಿಯೂರಪ್ಪ ಸಿಎಂ ಆಗಿದ್ದಾಗ ಯುಪಿಎ ಆಡಳಿತದಲ್ಲಿ ಇದ್ರೂ ತಕ್ಷಣ ೧ ಸಾವಿರ ಕೋಟಿ ನೀಡಿದ್ದರು ಆದ್ರೆ ಅವರದ್ದೇ ಕೇಂದ್ರ ಸರಕಾರ ಇದ್ರೂ ಯಾವುದೇ ಪರಿಹಾರ ಘೋಷಣೆ ಮಾಡಲಿಲ್ಲ ಎಂದರು.
ಪೋನ್ ಕದ್ದಾಳಿಕೆ ವಿಚಾರ ಸಿಬಿಐ ತನಿಖೆಗೆ ಸ್ವಾಗತ:
ಫೋನ್ ಕದ್ದಾಳಿಕೆ ವಿಚಾರ ಸಂಬಂಧಿಸಿದಂತೆ ಕಳೆದ ಒಂದು ತಿಂಗಳಿಂದ ಮಾಧ್ಯಮದವರು ಸುದ್ದಿ ಮಾಡುತ್ತಿದ್ದಾರೆ.‌ ಆದರೆ ಯಾವುದೇ ತನಿಖೆ ಮಾಡಿದರೂ ನನ್ನ ಬಗ್ಗೆ ತಪ್ಪು ಕಾಣುವುದಕ್ಕೆ ಸಾಧ್ಯವಿಲ್ಲ. ನೀವು ಎಷ್ಟೇ ಕಷ್ಟ ಪಟ್ಟರೂ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ.‌ ಸಿದ್ದರಾಮಯ್ಯ ಮನವಿಗೆ ಯಡಿಯೂರಪ್ಪ ಸ್ಪಂದಿಸಿದಕ್ಕೆ ಅವರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಯಾರ ಯಾರ ಒಳ ಒಪ್ಪಂದ ಇದೆ ಎಂದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ ಎಂದರು.
ಯಡಿಯೂರಪ್ಪ ಹಿಂದೆ ಇದ್ದಾಗ ಹಿಂದೆ ಏನಾಗಿದೆ ಸಿದ್ದರಾಮಯ್ಯ ಇದ್ದಾಗ ಏನಾಗಿದೆ ಎಲ್ಲವನ್ನೂ ಸೇರಿಸಿ‌ ಸಿಬಿಐ ನೀಡಲಿ. ನಾನು ಸಿಬಿಐ ತನಿಖೆಯನ್ನು ಸ್ವಾಗತಿಸುತ್ತೇನೆ.‌ ನಮ್ಮ ಕುಟುಂಬವನ್ನು ತನಿಖೆ ಮೂಲಕ ಕಡಿವಾಣ ಹಾಕಲು ಹತ್ತು ಜನ್ಮ ಹುಟ್ಟಿ ಬಂದರೂ ಅಸಾಧ್ಯ. ನನ್ನ ಸ್ಟೋರಿ ಮಾಡಿ ಮಾದ್ಯಮ ಖುಷಿ ಪಟ್ಟುಕೊಳ್ಳಿ ಹೆದರುವ ಪ್ರಶ್ನೆ ಇಲ್ಲ ಎಂದರು.